ಭಾರತೀಯ ವಾಸ್ತುಶಿಲ್ಪ

ಪ್ರಪಂಚದ ಎಲ್ಲೆಡೆಗಳಂತೆ ಭಾರತದಲ್ಲೂ ವಾಸ್ತುಶಿಲ್ಪದ ಆರಂಭದ ಹೆಜ್ಜೆಗಳನ್ನು ಕಾಣುವುದು ಗೃಹಗಳಲ್ಲಿ. ಬಲೂಚಿಸ್ತಾನದ ಕಿಲಿಘುಲ್ ಮೊಹಮದ್, ರಣಘುಂಡೈ ಮುಂತಾದ ನಿವೇಶನಗಳಲ್ಲಿ ನೆಲಸಿದ ಜನರು ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳಿಂದ ಮನೆಗಳನ್ನು ಕಟ್ಟಿದ್ದರು. ಮೊದಮೊದಲು ಬೆಂಕಿಗೂಡುಗಳು ಮನೆಯ ಹೊರಗೆ ಅಂಗಳದಲ್ಲಿದ್ದು ಅನಂತರ ಮನೆಯೊಳಗೆ ಸ್ಥಾನ ಪಡೆದುವು. ಕೆಲವು ಮನೆಗಳೊಳಗೆ ಬಾವಿಗಳೂ ಇದ್ದುವು. ಹರಪ್ಪ ಸಂಸ್ಕøತಿಯ ಜನ ಸುಧಾರಿಸಿದ ನಾಗರಿಕ ವಸತಿಗಳನ್ನು ಕಟ್ಟಿಕೊಂಡಿದ್ದರು. ಸಮಕಾಲೀನವಾಗಿ ದಕ್ಖನ್ ಪ್ರದೇಶದಲ್ಲಿ ಜನರು ಇನ್ನೂ ಮರದ ಕಂಬ ಮತ್ತು ಸೊಪ್ಪಿನ ತಡಿಕೆಗಳಿಂದ ನಿರ್ಮಿಸಿದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಆರ್ಯರು ದಟ್ಟವಾದ ಮರಗಳ ಮಧ್ಯೆ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಇವುಗಳ ಗುಂಪೇ ಗ್ರಾಮ. ಇದರ ಸುತ್ತಲೂ ಬಿದಿರಿನ ದಸಿ ಬೇಲಿಯಿರುತ್ತಿತ್ತು. ಉದ್ದವಾಗಿ ನಿಲ್ಲಿಸಿದ ಬಿದಿರು ಕಂಬಗಳನ್ನು (ಥಭ) ಸೂಚಿ ಎಂಬ ಮೂರು ಸಮತಲದ ಪಟ್ಟೆಗಳು ಆಧರಿಸಿ ಹಿಡಿದಿದ್ದುವು. ಸಾಮಾನ್ಯವಾಗಿ ವೃತ್ತಾಕಾರದ ಗುಡಿಸಿಲು ಕ್ರಮೇಣ ಅಂಡಾಕಾರವಾಗಿ ಮಾರ್ಪಟ್ಟು ಮೇಲ್ಚಾವಣಿಯನ್ನು ಬಗ್ಗಿಸಿದ ಬಿದಿರುಗಳಿಂದ ಪೀಪಾಯಿ ಮಾದರಿಯ ಅರ್ಧ ಉರುಳೆಯಾಕಾರದಲ್ಲಿ ಎಬ್ಬಿಸಲಾಗುತ್ತಿತ್ತು. ಆದರೆ ಈಗ ಇಂಥ ಯಾವ ಅವಶೇಷಗಳೂ ಉಳಿದು ಬಂದಿಲ್ಲ. ಅನಂತರ ಕಾಲದ ಬೌದ್ಧ ಸ್ತೂಪಗಳನ್ನು ಕಂಡರಿಸಲಾಗಿರುವ ನಗರ ವಾಸದ ಚಿತ್ರಗಳಿಂದ, ಸಮಕಾಲೀನ ಸಾಹಿತ್ಯಕ ಆಧಾರಗಳಿಂದ ಇಂತ ಕೆಲವು ವಿವರಗಳು ತಿಳಿದುಬಂದಿವೆ. ಜನಸಾಮಾನ್ಯರು ದೇವಾಲಯಗಳನ್ನು ನಿರ್ಮಿಸುವ, ಉತ್ಸವಗಳನ್ನು ಆಚರಿಸುವ, ದೇವತಾ ವಿಗ್ರಹಗಳನ್ನು ನಿರ್ಮಿಸುವ ಮತ್ತು ಭಕ್ತಿ ಪ್ರಧಾನವಾದ ಇತರ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದರೆಂಬ ಸಂಗತಿ ಕೂಡ ಈ ಆಕರಗಳಿಂದಲೇ ತಿಳಿದುಬರುತ್ತದೆ. ಪತಂಜಲಿಯ 'ಮಹಾಭಾಷ್ಯ ದಲ್ಲಿ ಸ್ಕಂದ. ವಿಶಾಖ ಮುಂತಾದ ದೇವತೆಗಳ ಪ್ರಸ್ತಾಪವಿದೆ. ಕ್ರಿ.ಪೂ. ಸು. 100ನೆಯ ವರ್ಷದ ಬೆಸ್ನಗರ ಶಾಸನದಲ್ಲಿ ಭಾಗವತ ಸಂಪ್ರದಾಯವನ್ನಪ್ಪಿದ್ದ ಹೆಲಿಯೊಡೋರಸ್ ಗರುಡ ಧ್ವಜವನ್ನು ಪ್ರತಿಷ್ಠಾಪಿಸಿದನೆಂದಿದೆ. ಕ್ರಿ.ಪೂ. ಸು. ಒಂದನೆಯ ಶತಮಾನದ ನಗರೀ ಶಾಸನದಲ್ಲಿ ಸಂಕರ್ಷಣ, ವಾಸುದೇವ ಮುಂತಾದವರಿಗೆ ಸಂಬಂಧಿಸಿದ ಶಿಲಾ ದೇವಾಲಯಗಳು ಪ್ರಸ್ತಾಪವಿದೆ. ಇವು ಮೇಲಿನ ಊಹೆಗಳನ್ನು ಪುಷ್ಟಿಗೊಳಿಸುತ್ತದೆ. ಆಂಧ್ರಪ್ರದೇಶದ ನಾಗಾರ್ಜುನಕೊಂಡದಲ್ಲಿ ಲಭಿಸಿರುವ ಶಾಸನಗಳಿಂದ ಕ್ರಿ.ಶ. 3ನೆಯ ಶತಮಾನದಲ್ಲಿ ಇಕ್ಷ್ವಕು ಅರಸರು ಮಹಾಸೇನ ಮುಂತಾದ ದೇವತೆಗಳಿಗೆ ಆಲಯಗಳನ್ನು ಕಟ್ಟಿಸಿರುವುದು ತಿಳಿದುಬಂದಿದೆ. ಭಾರ್ಹುತ್, ಸಾಂಚಿ, ಅಮರಾವತಿ ಗಳಲ್ಲಿಯ ಅರೆಯುಬ್ಬು ಚಿತ್ರಗಳಲ್ಲಿ ಬೇರೆ ಬೇರೆ ಆಕಾರಗಳ ಸಣ್ಣ ಗುಡಿಗಳ ಚಿತ್ರಣವಿರುವುದನ್ನೂ ಕ್ರಿಸ್ತಶಕಾರಂಭದಲ್ಲಿ ಯೌಧೆಯ, ಔದುಂಬರ ಮುಂತಾದ ಗಣರಾಜ್ಯಗಳು ಅಚ್ಚು ಹಾಕಿಸಿದ ನಾಣ್ಯಗಳಲ್ಲಿ ಕಿರುಪ್ರಮಾಣದ ಗುಡಿಗಳ, ಲಿಂಗವಿರುವ ವೇದಿಕೆಗಳ ಚಿತ್ರಣಗಳಿರುವುದನ್ನೂ ಸ್ಮರಿಸಬಹುದು. ಗುಪ್ತರ ಆಳ್ವಿಕೆಯ ಕಾಲದಿಂದ (ಕ್ರಿ.ಶ. 4ನೆಯ ಶತಮಾನ) ಭಾರತೀಯ ವಾಸ್ತುಶಿಲ್ಪಕ್ಕೆ ವಿಶೇಷವಾದ ಪ್ರೋತ್ಸಾಹ ಲಭಿಸಲು ಆರಂಭವಾಯಿತು.

	ಬೌದ್ಧಧರ್ಮೀಯರು ಪ್ರಾಕೃತಿಕ ಪರಿಸರಗಳಲ್ಲಿ, ಬೆಟ್ಟಗಳ ಬಂಡೆಗಳಲ್ಲಿ ಕೊರೆದ ಗುಹಾಲಯಗಳೂ ಹಿಂದೂಗಳಿಗೂ ಮಾದರಿಗಳಾದುವು 6-8ನೆಯ ಶತಮಾನಗಳಲ್ಲಿ ಬಾದಾಮಿ, ಎಲಿಫೆಂಟ, ಎಲ್ಲೋರ, ಮಹಾಬಲಿಪುರ ಮುಂತಾದಡೆಗಳಲ್ಲಿ ಗುಹಾಲಯಗಳು ನಿರ್ಮಾಣಗೊಂಡವು. ಆದರೆ ಆ ವೇಳೆಗೆ ಉತ್ತರ ಭಾರತದಲ್ಲಿ ಹಲವಾರು ಕಡೆ ಕಲ್ಲಿನಲ್ಲಿ ಕಟ್ಟಿದ ದೇವಾಲಯಗಳು ತಲೆ ಎತ್ತಿದ್ದುವು. ಹಿಂದೂ ದೇವಾಲಯಗಳನ್ನು ವಾಸ್ತುಶಿಲ್ಪ ರಚನೆಯ ದೃಷ್ಟಿಯಿಂದ ಮಾನವದೇಹ ರಚನೆಗೆ ಸಮವೆಂದು ಭಾವಿಸಲಾಗಿದೆ. ದೇವಾಲಯದ ಭಾಗಗಳಿಗೂ ಆಪಾದಮಸ್ತಕ ಮಾನವ ದೇಹಾಂಗಗಳ ಹೆಸರುಗಳನ್ನೇ ಇಟ್ಟಿರುವುದು ಗಮನಾರ್ಹ. ಪ್ರಸಾದ ಎಂಬ ಮಾತಿಗೆ ಅರಮನೆ ಹಾಗೂ ದೇವಾಲಯ ಎಂಬ ಎರಡು ಅರ್ಥಗಳು ಇವೆ. ಅರಮನೆಯಲ್ಲಿ ವಾಸಿಸುವ ಚಕ್ರವರ್ತಿಯಂತೆ ದೇವಾಲಯದ ಒಳಭಾಗದಲ್ಲಿರುವಾತನೂ ದೇವಾಧಿದೇವನೇ. ಅರಸನಿಗೆ ನೀಡಬಹುದಾದ ಎಲ್ಲ ಸನ್ಮಾನ ಗೌರವಗಳು ದೇವರಿಗೂ ಸಲ್ಲುತ್ತವೆ. ನೃತ್ಯ, ಸಂಗೀತ ಮುಂತಾದ ಸೇವೆಗಳಿಗೆ ವಿಶೇಷವಾದ ಮಂಟಪಗಳನ್ನು ತದನಂತರದ ಶತಮಾನಗಳಲ್ಲಿ ದೇವಾಲಯಗಳಿಗೂ ಸೇರಿಸಲಾಗಿದೆ. ಆದರೆ ದೇವಾಲಯ ಮೂಲತಃ ಒಂದು ಪೂಜಾಮಂದಿರ, ಹಿಂದೂಗಳ ಪೂಜಾಕ್ರಮ ಸಾಮೂಹಿಕವಾಗಿರದೆ ವ್ಯಕ್ತಿಗತವಾಗಿರುವುದರಿಂದ ಗರ್ಭಗುಡಿಯೊಳಗಿನ ದೇವರಿಗೆ ಒಬ್ಬೊಬ್ಬನೂ ವ್ಯೆಯಕ್ತಿಕವಾಗಿ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾನೆ. ದೈವ ಸಾಕ್ಷಾತ್ಕಾರ ಮೂಲ ಉದ್ದೇಶವಾದ ಕಾರಣ ದೇಹದೊಳಗೆ ನೆಲಸಿರುವ ಆತ್ಮನಂತೆ ದೈವವೂ ಗರ್ಭಗುಡಿಯ ಕತ್ತಲಿನಲ್ಲಿ ನಾಲ್ಕುಗೋಡೆಗಳ ಮಧ್ಯ ನೆಲಸಿರುವಂತೆ ಕಲ್ಪಿಸಲಾಗಿದೆ-ಇದು ಗುಹೆ. ಇದರ ಮೇಲಿನ ಶಿಖರವನ್ನು ಮೇರು, ಮಂದರ ಅಥವಾ ಕೈಲಾಸ ಎಂದು ಕರೆಯಲಾಗಿದೆ. ಗರ್ಭ ಗುಡಿಗೆ ಒಂದೇ ದ್ವಾರ. ಉಳಿದ ಮೂರು ಕಡೆ ಬಾಗಿಲಿನಂಥ ವಿನ್ಯಾಸವಿದ್ದು ಅಲ್ಲಿ ಒಳ ಹೊರಭಾಗಗಳಲ್ಲಿ ಗೂಡುಗಳನ್ನು ಅಳವಡಿಸಲಾಗಿರುತ್ತದೆ. ಇವುಗಳಲ್ಲಿ ಗರ್ಭಗುಡಿಯೊಳಗಿನ ದೇವರಿಗೆ ಸಂಬಂಧಿಸಿದಂಥ ಅಧಿದೇವತೆಗಳ, ಅವತಾರ ಮೂರ್ತಿಗಳ ವಿಗ್ರಹಗಳನ್ನು ಪ್ರತಿಷ್ಠಿಸಲಾಗಿರುತ್ತದೆ.

	ಬೌದ್ಧ ಮತ್ತು ಜೈನಧರ್ಮೀಯರಿಗೆ ಸ್ತೂಪ ಧಾರ್ಮಿಕ ಕಟ್ಟಡ. ವರ್ತುಲನಳಿನಾಕೃತಿಯ ಒಂದು ಅಥವಾ ಹೆಚ್ಚಿನ ಮೇಧಿಯ ಮೇಲೆ ಅರ್ಧಗೋಳಾಕಾರದ ಗುಮ್ಮಟ, ಅದರ ಮೇಲೆ ಕೊಡೆಗಂಬವನ್ನು (ಯಷ್ಟಿ) ಸುತ್ತುವರಿದ ಅಡ್ಡ ಪಟ್ಟಿಗಳ ಅಲಂಕಾರ ಮಂಟಪ-ಇದನ್ನು ಹರ್ಮಿಕಾ ಎನ್ನಲಾಗಿದೆ. ಇದಕ್ಕೆ ವೇದಿಕೆಯಿಂದ ಸುತ್ತುಗಟ್ಟಲ್ಪಟ್ಟ ಒಂದು ಅಥವಾ ಹೆಚ್ಚಿನ ಪ್ರದಕ್ಷಿಣಾಪಥವಿರುತ್ತದೆ. ಆರಂಭದಲ್ಲಿ ತಗ್ಗಾದ ಮೇಧಿಯ ಸ್ತೂಪಗಳು ಅರ್ಧ ವರ್ತುಲಾಕಾರದಲ್ಲಿದ್ದು ಕ್ರಮೇಣ ವರ್ತುಲಸ್ತಂಭಾಕೃತಿಯನ್ನು ಪಡೆದುವು. ಅನಂತರ ಹಲವಾರು ಅಂತಸ್ತುಗಳ ಮೇಧಿಗಳ, ಛತ್ರಾವಳಿಗಳ ಕಟ್ಟಡಗಳು ಅಸ್ತಿತ್ವಕ್ಕೆ ಬಂದುವು. ಸ್ತೂಪಗಳ ಈ ವಿವಿಧ ಭಾಗಗಳನ್ನು ದೇವಾಲಯಗಳನ್ನು ಅಳವಡಿಸಲಾಯಿತು. ಅಶೋಕ ಮೌರ್ಯ ಕಟ್ಟಿಸಿದ ಸ್ತೂಪಗಳಲ್ಲಿ ಸಾಂಚಿ ಸಾರನಾಥಗಳಲ್ಲಿರುವವು ಪ್ರಾಚೀನ ಮಾದರಿಗಳೂ, ಸಾಂಚಿಯಲ್ಲಿಯ ಸ್ತೂಪ ಮೂಲತಃ ದೊಡ್ಡ ಪ್ರಮಾಣದ, ಇಟ್ಟಿಗೆಗಳಿಂದ ಕಟ್ಟಲ್ಪಟ್ಟ ತಗ್ಗಾದ ಕಟ್ಟಡ. ಇದರ ಸುತ್ತಲೂ ಮರದ ಅಡ್ಡಪಟ್ಟಿಗಳಿದ್ದು ದಕ್ಷಿಣದ ತುದಿಯಲ್ಲಿ ಒಂದು ಕಂಬವಿತ್ತು. ಸುಮಾರು ಒಂದು ಶತಮಾನದ ಅನಂತರ ಇಲ್ಲಿಯ ಇಟ್ಟಿಗೆಯನ್ನು ಕಲ್ಲುಗಳಿಂದ ಮುಚ್ಚಿ ಎತ್ತರದ ಸೋಪಾನವನ್ನು ಸೇರಿಸಲಾಯಿತು. ಇದರ ದಕ್ಷಿಣಕ್ಕೆ ಎರಡು ಸಾಲು ಮೆಟ್ಟಲುಗಳನ್ನು ಅಳವಡಿಸಲಾಯಿತು. ಸ್ತೂಪದ ಮೇಲೆ ಮೂರು ಛತ್ರಿಗಳ ಒಂದು ಕಂಬವಿದ್ದು. ಇದನ್ನು ಸುತ್ತುವರಿದ ಅಡ್ಡಪಟ್ಟಿಗಳಿಗೆ ನಾಲ್ಕು ದ್ವಾರಗಳಿದ್ದುವು. ಇವುಗಳ ಮೇಲಿನ ಕಂಬಗಳಲ್ಲಿ ತೊಲೆಗಳಲ್ಲಿ ಬುದ್ಧನ ಜೀವನಕ್ಕೆ ಸಂಬಂಧಿಸಿದ ಜಾತಕ ಕಥೆಗಳಿಂದ ಆಯ್ದ ಘಟನೆಗಳನ್ನು ಚಿತ್ರಿಸಲಾಗಿತ್ತು. ಒಂದೊಂದು ತುದಿಯಲ್ಲೂ ಒಂದು ಧರ್ಮಚಕ್ರವಿದೆ. ದಕ್ಷಿಣ ಭಾರತದಲ್ಲಿ ಕೃಷ್ಣಾಗೋದಾವರಿಗಳ ನಡುವಣ ಆಂಧ್ರಪ್ರದೇಶದಲ್ಲಿ ಕ್ರಿ.ಪೂ. ಸುಮಾರು 200ರಿಂದ ಕ್ರಿ.ಶ. 300ರ ತನಕದ ಸ್ತೂಪಗಳ ಅವಶೇಷಗಳು ಹಲವಾರು ದೊರೆತಿವೆ. ಇವುಗಳಲ್ಲಿ ಅಮರಾವತಿ, ನಾಗಾರ್ಜುನಕೊಂಡ, ಜಗ್ಗಯ್ಯಪೇಟ, ಗುಡಿವಾಡ, ಘಂಟಸಾಲ, ಭಟ್ಟಿಪ್ರೋಲು ಮುಂತಾದ ಕಡೆಗಳಲ್ಲಿರುವವು ಉತ್ತಮ ಮಾದರಿಗಳು. ತಗ್ಗಾದ ತಳಪಾಯದ ಮೇಲೆ ಇಟ್ಟಿಗೆಯಲ್ಲಿ ಕಟ್ಟಿದ ಅರ್ಧಗೋಳಾಕಾರದ ಗುಮ್ಮಟಗಳು ನಾಲ್ಕು ಪ್ರಧಾನ ದಿಕ್ಕುಗಳಲ್ಲೂ ಮುಂಚಾಚಿದ್ದು ಈ ಒಂದೊಂದು ಮುಂಚಾಚಿನಲ್ಲಿಯೂ ಎತ್ತರವಾದ, ಸುಂದರವಾಗಿ ಕಡೆಯಲ್ಪಟ್ಟ ಐದು ಸ್ತಂಭಗಳಿದ್ದುದು ಈ ಸ್ಥಳಗಳಲ್ಲಿಯ ಸ್ತೂಪಗಳ ಒಂದು ವೈಶಿಷ್ಟ್ಯ. ಅಮರಾವತಿ, ನಾಗಾರ್ಜುನಕೊಂಡಗಳ ಸ್ತೂಪಗಳಲ್ಲಿ ಅಡ್ಡಪಟ್ಟಿಗಳನ್ನು ಸೂಕ್ಷ್ಮವಾದ ಕೆತ್ತನೆಗಳಿಂದ ಅಲಂಕರಿಸಲಾಗಿತ್ತು. ತಳಪಾಯದಲ್ಲಿ, ಗುಮ್ಮಟಗಳಲ್ಲಿ ಮೂರ್ತಿ ವಿಗ್ರಹಗಳ ಶಿಲೆಗಳನ್ನು ಅಳವಡಿಸಲಾಗಿತ್ತು. ಆಫ್‍ಘಾನಿಸ್ತಾನದ ತಕ್ಷಶಿಲೆ, ಮಾಣಿಕ್ಯಾಲ, ಚಾರ್‍ಸಹ, ತಖ್ತ್ ಇ ಬಹಾಯ್ ಮುಂತಾದೆಡೆಗಳಲ್ಲಿ ಕಲ್ಲಿನಿಂದ ಕಟ್ಟಿದ ಸ್ತೂಪಗಳಿವೆ. ಇವನ್ನು ಸುಣ್ಣ ಅಥವಾ ಗಾರೆಯಿಂದ ಗಿಲಾವು ಮಾಡಲಾಗಿದ್ದು ಗಾಂಧಾರ ಶೈಲಿಯ ಸ್ತಂಭವಿನ್ಯಾಸಗಳಿಂದ, ಬುದ್ಧ ವಿಗ್ರಹಗಳಿಂದ ಅಲಂಕರಿಸಲಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ಗುಪ್ತ ಹಾಗೂ ಅನಂತರದ ಕಾಲದ ಸ್ತೂಪಗಳು ಇಟ್ಟಿಗೆಯ ಕಟ್ಟಡಗಳು, ಮಿರ್ ಪುಖಾಸ್‍ನ ಸ್ತೂಪದ ತಳಪಾಯದಲ್ಲಿ ಮೂರು ಕಮಾನಿನ ಗೂಡುಗಳಿದ್ದು ಒಂದೊಂದನ್ನು ಬುದ್ಧನ ವಿಗ್ರಹಗಳುಳ್ಳ ಗರ್ಭಗೃಹದಂತೆ ತೋರಿಸಲಾಗಿದೆ. ಮುಂದಿನ ಕಾಲದಲ್ಲಿ ಕಂಡುಬಂದ ತ್ರಿಕೂಟಗಳಿಗೆ ಇದು ಸ್ಫೂರ್ತಿ ನೀಡಿದಂತೆ ತೋರುತ್ತದೆ. ಉತ್ತರ ಭಾರತದ ಬಯಲು ಪ್ರದೇಶದಲ್ಲಿ ಗುಪ್ತರ ಕಾಲದಿಂದ 12ನೆಯ ಶತಮಾನದ ತನಕ ಕಟ್ಟಲಾದ ಸ್ತೂಪಗಳು ಇಟ್ಟಿಗೆಯವು. ಒಂದಕ್ಕೂ ಹೆಚ್ಚಿನ ಸೋಪಾನವುಳ್ಳ ಎತ್ತರದ ಅಧಿಷ್ಠಾನದ ಮೇಲೆ ವರ್ತುಲ ನಳಿನಾಕಾರದಲ್ಲಿರುವುದು ಇವುಗಳ ಲಕ್ಷಣ. ಸಾರನಾಥದ ಧಮೇಖ್ ಸ್ತೂಪದ ಅಡಿಪಾಯದಲ್ಲಿ ಎಂಟು ಮುಂಚಾಚಿದ ಮುಖಗಳಲ್ಲಿ ವಿಗ್ರಹಗಳಿಗಾಗಿ ಗೂಡುಗಳನ್ನು ಅಳವಡಿಸಲಾಗಿದೆ.

	ಕಲ್ಲಿನಲ್ಲಿ (ಜ್ವಾಲಾಮುಖಿ ಶಿಲೆಗಳಲ್ಲಿ) ಕೊರೆದ ಗುಹಾಲಯಗಳು ವಿಶೇಷವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಂಡುಬಂದಿವೆ. ಇವುಗಳ ವಾಸ್ತುಶಿಲ್ಪವನ್ನು ದೇವಾಲಯ ವಾಸ್ತುಶಿಲ್ಪವೆಂದು ಭಾವಿಸಲು ಸಾಧ್ಯವಿಲ್ಲವಾದರೂ ಇದೇ ವಿನ್ಯಾಸ ಹಾಗೂ ರಚನಾಕ್ರಮಗಳು ಬಯಲಿನಲ್ಲಿ ಕಟ್ಟಿದ ದೇವಾಲಯಗಳಲ್ಲೂ ಕಂಡು ಬಂದಿರುವುದು ಗಮನಿಸಬೇಕಾದ ಸಂಗತಿ. ಭಾರತದಲ್ಲಿ ಕಂಡುಬಂದಿರುವ ಸುಮಾರು 1200ಕ್ಕೂ ಹೆಚ್ಚು ಗುಹಾಲಯಗಳಲ್ಲಿ 900 ಬೌದ್ಧ, 200 ಜೈನ ಹಾಗೂ ಉಳಿದವು ಹಿಂದೂಧರ್ಮಕ್ಕೆ ಸಂಬಂಧಿಸಿವೆ. ಅಜಂತಾ, ಕಾರ್ಲೆ, ನಾಸಿಕ್, ಎಲ್ಲೋರಾಗಳಲ್ಲಿಯ ಬೌದ್ಧ, ಎಲ್ಲೋರಾದ ಜೈನ, ಎಲೆಫೆಂಟ, ಬಾದಾಮಿ, ಮಹಾಬಲಿಪುರಮ್, ಎಲ್ಲೋರಾಗಳಲ್ಲಿಯ ಹಿಂದೂ ಗುಹಾಲಯಗಳು ಪ್ರಮುಖವಾದವು. ಕಾಲದ ದೃಷ್ಟಿಯಿಂದ ಕ್ರಿ. ಪೂ. 2-ಕ್ರಿ. ಶ. 2ನೆಯ ಶತಮಾನ, 5-7ನೆಯ ಶತಮಾನ, 7-10ನೆಯ ಶತಮಾನಗಳಲ್ಲಿ ಕಟ್ಟಲ್ಪಟ್ಟ ಗುಹಾಲಯಗಳೆಂದು ಇವನ್ನು ವಿಂಗಡಿಸಬಹುದು. ಅಜಂತಾದ 30 ಗುಹೆಗಳೂ ಬೌದ್ಧಧರ್ಮೀಯ; ಕ್ರಿ. ಪೂ. 2-ಕ್ರಿ. ಶ. 7ನೆಯ ಶತಮಾನದ ತನಕ ಇವುಗಳ ಕಾಲಮಿತಿ. ಎಲ್ಲೋರಾದಲ್ಲಿಯ ಕ್ರಿ. ಶ. 5-8ನೆಯ ಶತಮಾನಗಳ ಕಾಲಾವಧಿಯ 34 ಗುಹೆಗಳಲ್ಲಿ ಬೌದ್ಧಧರ್ಮಕ್ಕೆ ಸಂಬಂಧಿಸಿದ ಗುಹೆಗಳು ಪ್ರಾಚೀನವಾದವು. ಅನಂತರ ಹಿಂದೂ ಮತ್ತು ಜೈನ ಧರ್ಮೀಯ ಗುಹಾಲಯಗಳು ಕಾಣಿಸಿಕೊಂಡವು. ಬೌದ್ಧಧರ್ಮದ ಆಜೀವಕರಿಗಾಗಿ ಬಿಹಾರದ ನಾಗಾರ್ಜುನಿ ಮತ್ತು ಬರಾಬರ್ ಗುಹೆಗಳಲ್ಲಿ ಕೊರೆಯಿಸಲ್ಪಟ್ಟ ಏಳು ಗುಹಾಲಯಗಳು ಅಶೋಕನ ಕಾಲದವು. ಸುಧಾಮ ಗುಹೆ ಅಶೋಕನ ಆಳ್ವಿಕೆಯ 12ನೆಯ ವರ್ಷದ್ದು. ಈ ಗುಹೆಯ ಹಾಗೂ ಲೋಮಷಋಷಿ ಗುಹಾಲಯದ ಒಳಭಾಗದ ವಿನ್ಯಾಸ, ವಿಶೇಷವಾಗಿ ಚಾಚಿಕೊಂಡಿರುವ ಸೂರನ್ನೊಳಗೊಂಡ ಗುಮ್ಮಟದ ಕಮಾನು ಹಾಗೂ ಸುಧಾಮ ಗುಹೆಯಲ್ಲಿ ಪ್ರತ್ಯೇಕಗೊಳಿಸಿದ ಮುಂಗೋಣೆ ವಿಶಿಷ್ಟತೆಯಿಂದ ಕೂಡಿವೆ. ಲೋಮಷಋಷಿ ಗುಹೆಯ ದ್ವಾರಮಂಟಪದಲ್ಲಿಯ ಅಲಂಕರಣ ಮರದ ಕೆತ್ತನೆಯನ್ನು ಅನುಸರಣೆ ಮಾಡಿದಂತಿದೆ. ಆರಂಭಘಟ್ಟದ ಗುಹಾಲಯಗಳೆಲ್ಲವೂ ಬೌದ್ಧಧರ್ಮೀಯವಾಗಿದ್ದು ಅವನ್ನು ಚೈತ್ಯ ಮತ್ತು ವಿಹಾರಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಚೈತ್ಯದಲ್ಲಿ, ಸ್ತೂಪ ಒಂದು ಪೂಜಾಮಂದಿರ, ವಿಹಾರಗಳು ಸನ್ಯಾಸಿಗಳ ವಾಸಸ್ಥಾನಗಳು. ಚೈತ್ಯದಲ್ಲಿ ಗುಮ್ಮಟದ ಚಾವಣಿಯ ವಿಶಾಲ ಸಭಾಂಗಣವಿರುವುದು. ಇದರ ಒಂದು ತುದಿ ಗಜಪೃಷ್ಠಾಕಾರದಲ್ಲಿ ಬಾಗಿರುವುದು. ಅಲ್ಲಿ ಸ್ತೂಪವೊಂದನ್ನು ಎಬ್ಬಿಸಲಾಗಿರುತ್ತದೆ.

	ಸಭಾಂಗಣವನ್ನು ಅಕ್ಷದ ಸುತ್ತಲೂ ಎರಡು ಸಾಲುಗಂಬಗಳು ಇಕ್ಕೆಲದ ಹಜಾರಗಳಾಗಿ ವಿಭಜಿಸಿದ್ದು ಮಧ್ಯೆ ಒಂದು ಅಂಗಣವಿರುತ್ತದೆ. ಸ್ತೂಪದ ಸುತ್ತಲೂ ಪ್ರದಕ್ಷಿಣೆಗಾಗಿ ಒಂದು ಪಥವಿರುತ್ತದೆ. ಶೈಲಿ, ವಿನ್ಯಾಸಗಳಲ್ಲಿ ಇವು ಮರದ ಪ್ರತಿಕೃತಿಗಳಾಗಿದ್ದು ಕೆಲವು ಚೈತ್ಯಗಳ ಮಾಳಿಗೆಯಲ್ಲಿ ಮರಗೆಲಸದ ಅವಶೇಷಗಳು ಕಂಡುಬಂದಿವೆ. ಚೈತ್ಯಗಳ ಮುಂಭಾಗ ಅಲಂಕೃತವಾಗಿದ್ದು ಒಂದು ಅಥವಾ ಹೆಚ್ಚಿನ ದ್ವಾರಗಳ ಜವನಿಕೆಗಳನ್ನೊಳಗೊಂಡಿರುತ್ತಿದ್ದು, ದ್ವಾರಗಳ ಮೇಲೆ ಬೆಳಕು ಬರಲು ಕಮಾನಿನ ಕಿಟಕಿಗಳಿರುತ್ತವೆ. ಗಜಪೃಷ್ಠಾಕಾರದ ವಿನ್ಯಾಸಗಳನ್ನು ಅನಂತರದ ದೇವಾಲಯ ವಾಸ್ತುಶಿಲ್ಪದಲ್ಲಿ ಬಳಸಲಾಯಿತು. ಕ್ರಿ. ಶ. 6ನೆಯ ಶತಮಾನದ ಐಹೊಳೆಯ ದುರ್ಗಾ ದೇವಾಲಯ. ಮಹಾಬಲಿಪುರದಲ್ಲಿಯ ಸಹದೇವ ರಥಗಳು ಇದಕ್ಕೆ ಉತ್ತಮ ಮಾದರಿಗಳು. ಬಾಗಿದ ಕಿಟಕಿಗಳ ವಿನ್ಯಾಸವನ್ನು ಅನಂತರಕಾಲದ ದಕ್ಷಿಣ ಭಾರತದ ದೇವಾಲಯಗಳಲ್ಲಿ ಅಲಂಕೃತ ಗೂಡುಗಳಾಗಿ ಕಪೋತದ ಮೇಲೆ ಅಳವಡಿಸಲಾಯಿತು. ಎರಡನೆಯ ಘಟ್ಟದಲ್ಲಿ ಸ್ತೂಪಗಳಲ್ಲಿ ಬುದ್ಧನ ವಿಗ್ರಹಗಳನ್ನು ಪ್ರತಿಷ್ಠಿಸಲಾಯಿತು. ಮಹಾಯಾನ ಪಂಥದ ಪ್ರಭಾವವಿದು. ಅಂತಿಮ ಘಟ್ಟದ ಗುಹಾಲಯಗಳು ಅನ್ಯಧರ್ಮಕ್ಕೆ ಸಂಬಂಧಿಸಿದವನ್ನು ಒಳಗೊಂಡಿವೆ. ಅವುಗಳಲ್ಲಿ ಒಮ್ಮೊಮ್ಮೆ ನವೀನತೆಯನ್ನು ಕಾಣಬಹುದು. ಎಲ್ಲೋರಾದ ದಶಾವತಾರ ಗುಹೆಯಲ್ಲಿ ಎರಡು ಅಂತಸ್ತುಗಳಿದ್ದು ಮುಂದಿನ ಅಂಗಳದಲ್ಲಿ ಒಂದು ನಂದಿಮಂಟಪ, ಕಂಬಸಾಲುಗಳ ಸಭಾಂಗಣಗಳು ಹಾಗೂ ಹಿಂಬದಿಯ ಗೋಡೆಗೆ ಹೊಂದಿದಂತೆ ಎರಡು ಸ್ತಂಭಗಳ ಮುಖಮಂಟಪ ಇದ್ದು ಅದು ಚೌಕಾಕಾರದ ಗರ್ಭಗೃಹಕ್ಕೆ ಮುಂದಿರುತ್ತದೆ. ಮೇಲಂತಸ್ತಿನ ಗೋಡೆಗಳಲ್ಲಿ ಶೈವ ವೈಷ್ಣವ ದೇವತಾ ವಿಗ್ರಹಗಳನ್ನು ಕೆತ್ತಿದ್ದು, ಇವೆಲ್ಲವೂ ಅನಂತರದ ದೇವಾಲಯ ವಾಸ್ತುಶಿಲ್ಪದ ಲಕ್ಷಣಗಳಾಗಿ ಕಾಣಿಸಿಕೊಂಡಿವೆ.

	ಎಲ್ಲೋರಾದ ಧುಮರ್‍ಲೇನ ಮತ್ತು ಎಲಿಫೆಂಟ ಹಾಗೂ ಜೋಗೇಶ್ವರಿಗಳಲ್ಲಿರುವ ಗುಹಾಲಯಗಳಲ್ಲಿ ಶಿಲುಬೆಯಾಕಾರದ ಸಭಾಂಗಣಗಳಿದ್ದು, ಮುಂಭಾಗದಲ್ಲಿ ಒಂದೊಂದು ಪಕ್ಕದಲ್ಲಿ ಒಂದರಂತೆ ಮೂರು ದ್ವಾರಗಳಿದ್ದುವು. ಮಧ್ಯದಲ್ಲಿ ನಾಲ್ಕು ಕಡೆಗೆ ದ್ವಾರಗಳುಳ್ಳ ಗರ್ಭಗುಡಿ, ಅಡ್ಡ ಭಾಗದ ಗೋಡೆಗಳಲ್ಲಿ ಉತ್ತಮ ಕೆತ್ತನೆಯ ಮೂರ್ತಿಶಿಲ್ಪಗಳು, ಗರ್ಭಗುಡಿಯ ದ್ವಾರಗಳಲ್ಲಿ ದ್ವಾರಪಾಲಕರ ವಿಗ್ರಹಗಳು ಇವೆ. ಕರ್ನಾಟಕದ ಬಾದಾಮಿ, ಆಂಧ್ರಪ್ರದೇಶದ ಅಡವಿಸೋಮಪಲ್ಲಿ, ಮೊಗಲ್ರಾಜಪುರಮ್ ಮುಂತಾದ ಕಡೆಗಳಲ್ಲಿ ಇದೇ ಬಗೆಯ (ಮಿತಿಯಾದ ಆಡಂಬರದ) ಕೊರೆದ ಆಲಯಗಳಿವೆ. ಬಾದಾಮಿಯಲ್ಲಿಯ ಆಲಯಗಳಲ್ಲಿ ಕಂಬಗಳು, ಚಿತ್ರಗಳ ಅಂಕಣ ಫಲಕಗಳು ಗಮನಾರ್ಹ. ಆಂಧ್ರಪ್ರದೇಶದ ಸ್ತಂಭಗಳ ವಿನ್ಯಾಸ ಸ್ವಾರಸ್ಯಕರವಾಗಿದೆ. ತಮಿಳುನಾಡಿನಲ್ಲಿ, ವಿಶೇಷವಾಗಿ ಮಹಾಬಲಿಪುರದಲ್ಲಿ ಒಂದು ಅಥವಾ ಹೆಚ್ಚಿನ ಗೂಡುಗಳ ಸ್ತಂಭಮಂಟಪಗಳನ್ನು ಕಾಣಬಹುದು. ಚೌಕಾಕಾರದ ಕಂಬಗಳು ಬಹುಸ್ಥೂಲವಾಗಿವೆ. ಪಲ್ಲವ ನರಸಿಂಹವರ್ಮನ ಕಾಲದ್ದೆನ್ನಲಾದ ಗುಹಾಲಯಗಳಲ್ಲಿ ಬೋದಿಗೆಯಲ್ಲಿ ಪಲಗೈ ವಿನ್ಯಾಸವುಳ್ಳ ತೆಳುವಾದ ಅರೆಗೊಳವಿಯಾಕಾರದ ಕಂಬಗಳಿವೆ.

	ಆನುಷಂಗಿಕವಾಗಿ ಇಲ್ಲಿ ಏಕಶಿಲೆಯಲ್ಲಿ ಕಡೆದ ವಿಶಿಷ್ಟ ಮಾದರಿಯ ಕೆಲವು ದೇವಾಲಯಗಳನ್ನು ಪ್ರಸ್ತಾವಿಸಬೇಕು. ಕಟ್ಟಿದ ದೇವಾಲಯಗಳನ್ನು ಎಲ್ಲ ವಿಧದಲ್ಲಿ ಹೋಲುವ ಇವನ್ನು ಒರಿಸ್ಸದ ಉದಯಗಿರಿಯ ಟಾವಾ ಗುಹೆಯಲ್ಲಿ, ತಮಿಳುನಾಡಿನ ಮಹಾಬಲಿಪುರದಲ್ಲಿ ಕಾಣಬಹುದು. ಇದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಎಲ್ಲೋರಾದ ಕೈಲಾಸನಾಥ ದೇವಾಲಯ, ಮಹಾಬಲಿಪುರದ ಗುಡಿಗಳು. ಇವುಗಳಿಗೆ ರಥಗಳೆಂದು ಹೆಸರು. ಇವನ್ನು ದೊಡ್ಡ ಬಂಡೆಯ ಮೇಲ್ಭಾಗದಿಂದ ಕೆಳಗಿನವರೆಗೆ ಕೆತ್ತಿ ಬಿಡಿಸಲಾಗಿದೆ. ಶಿಖರದ ಮೇಲಿನ ಸ್ತೂಪಿಯನ್ನು ಮಾತ್ರ ಪ್ರತಿಷ್ಠಾಕಾಲದಲ್ಲಿ ಕೂಡಿಸಿದೆ. ಘನಾಕೃತಿಯ ದ್ರೌಪದಿ ರಥದ ಗುಡಿಯಮೇಲೆ ಗುಡಿಸಿಲಿನ ವಿನ್ಯಾಸವಿದೆ. ವಲಯಂಕುಟ್ಟೆ, ಪಿಡಾರಿ ಅರ್ಜುನ ರಥಗಳಲ್ಲಿ ಎರಡು ಅಂತಸ್ತುಗಳ ವಿಮಾನವಿದ್ದು, ಬೋದಿಗೆಯ ಮೇಲಿನ ಹಾರದಲ್ಲಿ ಕೋಷ್ಠ ಅಥವಾ ಶಾಲಾ ಎನಿಸಿದ ಕಿರು ಪ್ರಮಾಣದ ಗುಡಿಗಳಿವೆ. ಅರ್ಜುನ ರಥದ ಗ್ರೀವ ಹಾಗೂ ಶಿಖರಗಳು ಅಷ್ಠಕೋನವಾಗಿ ಛೇದಿಸಲ್ಪಟ್ಟಿವೆ. ಒಂದೊಂದು ಅಂತಸ್ತಿನ ಮೇಲೂ ಪಾಗಾರಗಳಿವೆ. ಮೂರು ಅಂತಸ್ತಿನ ಧರ್ಮರಾಜ ರಥದಲ್ಲಿ ಒಂದೊಂದರಲ್ಲೂ ಪೂಜೆಗೆ ಅರ್ಹವಾದ ವಿಗ್ರಹಗಳನ್ನಿಡುವ ಗೂಡುಗಳಿವೆಯಲ್ಲದೆ ಒಂದೊಂದನ್ನೂ ಪಾಗಾರಗಳಿಂದ ಪ್ರತ್ಯೇಕಗೊಳಿಸಲಾಗಿದೆ. ಭೀಮ ಹಾಗೂ ಗಣೇಶ ರಥಗಳು ದೀರ್ಘ ಚತುರಸ್ರಾಕಾರದಲ್ಲಿದ್ದು ಮೇಲೆ ಶಾಲಾಕಾರಗಳಿವೆ. ನಕುಲ-ಸಹದೇವ ರಥಗಳು ಗಜಪೃಷ್ಠಾಕಾರ ವಿನ್ಯಾಸ ಹೊಂದಿವೆ. ರಾಷ್ಟ್ರಕೂಟ ಕೃಷ್ಣ (I) ಕೊರೆಯಿಸಿದ ಎಲ್ಲೋರಾದ ಕೈಲಾಸ ದೇವಾಲಯ ಅದ್ವಿತೀಯ ರಚನೆ. 60 ಮೀ ಉದ್ದ, 30 ಮೀ ಅಗಲ, 30 ಮೀ ಎತ್ತರದ ದೊಡ್ಡ ಬಂಡೆಗಲ್ಲನ್ನು ಸುತ್ತಲೂ ಕೆಳಮುಖವಾಗಿ ಕೆತ್ತಿಕೊಂಡು ಹೋಗಿರುವ ಈ ಏಕಶಿಲಾಲಯದಲ್ಲಿ ವಿಮಾನ, ಅಕ್ಷ ಮಂಟಪಗಳು, ನಂದಿಮಂಟಪ ಇವೆ. ಬಂಡೆಯನ್ನು ಹೊಂದಿಕೊಂಡಂತೆ ಸಾಲಾಗಿ ಗುಡಿಗಳು, ಎರಡು ಸ್ವತಂತ್ರವಾಗಿ ನಿಂತಿರುವ ಕಂಬಗಳು, ಸುತ್ತಲೂ ಪ್ರದಕ್ಷಿಣಾಪಥ, ಎರಡಂತಸ್ತಿನ ಗೋಪುರ, ದ್ವಾರಗಳು ಏಕತ್ರ ಕೂಡಿವೆ. ಮೇಲಿನ ಅಂತಸ್ತನ್ನು ಬಂಡೆಯ ಒಂದು ಸೇತುವೆ ನಂದಿಮಂಟಪಕ್ಕೆ ಕೂಡಿಸಿದೆ. ಎತ್ತರದ ಅಧಿಷ್ಠಾನದ ಸುತ್ತಲೂ ಎದ್ದು ಕಾಣುವಂತೆ ಕೆತ್ತಿದ ಆನೆ, ಸಿಂಹ ಮುಂತಾದ ವಿಗ್ರಹಗಳ ಅಲಂಕಾರ ಪಟ್ಟಿಕೆಯಿದೆ. ಮುಖ್ಯ ವಿಮಾನದ ಗ್ರೀವ ಮತ್ತು ಶಿಖರಗಳು ಅಷ್ಟಕೋನಾಕೃತಿಯಲ್ಲಿವೆ. ಪಟ್ಟದಕಲ್ಲಿನ ವಿರೂಪಾಕ್ಷಗುಡಿಯನ್ನು ಮಾದರಿಯಾಗಿರಿಸಿಕೊಂಡಿರುವುದಾಗಿ ಭಾವಿಸಲಾದ ಈ ಆಲಯ ದ್ರಾವಿಡ ಶೈಲಿಯಲ್ಲಿದೆ. ತಮಿಳುನಾಡಿನಲ್ಲಿ ಕಳುಗುಮಲೈಯಲ್ಲಿ ಇದೇಬಗೆಯ, ಕಿರಿಯ ಪ್ರಮಾಣದ ವೆಟ್ಟುವಾನ್ ಕೋವಿಲ್ ಇದೆ. 25 ಮೀ ಉದ್ದ. 13 ಮೀ ಅಗಲ ಹಾಗೂ 10.5 ಮೀ ಆಳದ ಈ ಗುಡಿಗೆ ಎರಡು ಅಂತಸ್ತುಗಳಿವೆ. ಆದರೆ ಇದರ ವಿಮಾನ ಹಾಗೂ ಅರ್ಧ ಮಂಟಪಗಳು ಅಪೂರ್ಣವಾಗಿ ಉಳಿದಿವೆ. ಮೇಲಿನ ಸ್ಕಂಧಭಾಗದ ನಾಲ್ಕೂ ಮೂಲೆಗಳಲ್ಲಿಯ ನಂದಿ ವಿಗ್ರಹಗಳು ಹಾಗೂ ಬ್ರಹ್ಮ, ವಿಷ್ಣು ಮತ್ತು ದಕ್ಷಿಣಾಮೂರ್ತಿಯ ವಿಗ್ರಹಗಳು ಮನೋಜ್ಞವಾಗಿವೆ. ನಾಗರಶೈಲಿಯ ಇಂಥ ಏಕ ಶಿಲಾ ಆಲಯಗಳನ್ನು ಮಧ್ಯಪ್ರದೇಶದ ಧಮ್ನಾರ್, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮಸ್ರೂರ್, ಬಿಹಾರದ ಕೊಲ್ಲಾಂಗ್‍ಗಳಲ್ಲಿ ಕಾಣಬಹುದು. ಧಮ್ನಾರ್ ಆಲಯ ಜಂಬುಮಣ್ಣಿನ ಗುಡ್ಡದಲ್ಲಿ ಕೊರೆದದ್ದು. ಇದೊಂದು ವೈಷ್ಣವಾಲಯ. ಮುಖಮಂಟಪ ವಿಮಾನದ ಸುತ್ತಲೂ ಅಂಥದೇ ಏಳು ಏಕಶಿಲೆಯ ಉಪಗುಡಿಗಳಿವೆ. ಪಂಚರಥ ಶೈಲಿಯ ಮೇಲ್ಕಟ್ಟಡವನ್ನು ಸೂಕ್ಷ್ಮವಾದ ಗವಾಕ್ಷ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಮಸ್ರೂರಿನ ಬೆಟ್ಟ ತುದಿಯಲ್ಲಿ ಮರಳುಗಲ್ಲಿನಲ್ಲಿ ಕಡೆದು ತೆಗೆದ ಏಕಶಿಲಾಲಯಗಳು ಉತ್ತರಭಾರತದ ತುದಿಯಲ್ಲಿಯ ಹಿಮಾಲಯ ಪ್ರದೇಶದ ನಾಗರಶೈಲಿಯ ಮಾದರಿಗಳು. 9ನೆಯ ಶತಮಾನದ ಈ ಆಲಯಗಳು ಬಿಡಿಬಂಡೆಗಳಿಂದ ಬಿಡಿಸಿದವು. ಮೂಲ ಗುಡಿಯ ವಿಮಾನದ ಮೇಲ್ಕಟ್ಟಡ ಸುತ್ತಲ ಇತರ ಗುಡಿಗಳಿಗಿಂತ ಎತ್ತರವಾಗಿದೆ. ಗುಡಿಯೊಳಗೆ ಹೋಗಲು ಕಂಬಸಾಲಿನ ಮುಖಮಂಟಪವನ್ನು ಹಾಯಬೇಕು. ಒಳಗಿನ ಮಂಟಪದ ಎರಡು ಕಡೆಗಳಲ್ಲಿ ಮಾಳಿಗೆ ಏರಲು ಮೆಟ್ಟಲುಗಳಿವೆ. ಕಂಬಸಾಲಿನ ಎರಡೂ ಬದಿಗಳಲ್ಲಿ ಏಕಶಿಲೆಯ ಘನದ್ವಾರದ ಗುಡಿಗಳಿದ್ದು ಈ ಸಂಕೀರ್ಣದ ಮುಂದೆ ಚೌಕಾಕಾರದ ಗರ್ಭಗೃಹ ಮತ್ತು ಷೋಡಶ ಮುಖಗಳ ಎರಡು ವಿಮಾನಗಳಿವೆ. ಕೊಲ್ಲಾಂಗ್‍ನಲ್ಲಿ ಕಗ್ಗಲ್ಲಿನಲ್ಲಿ ಕೊರೆದ ಅಪೂರ್ಣವಾದ, ಹೆಚ್ಚು ಕಡಿಮೆ ಚೌಕಾಕಾರದ ವಿಮಾನ ಕಂಡುಬಂದಿದೆ. ಶಾಲಾಶೈಲಿಯ ಮೇಲ್ಕಟ್ಟಡವಿದೆ. ಪೂರ್ವ ಪಶ್ಚಿಮ ತುದಿಗಳ ಗೋಡೆಗಳಲ್ಲಿ ಒರಿಯ ಶೈಲಿಯ ರಥಗಳ ಮಾದರಿಯ ಉಬ್ಬು ಫಲಕಗಳನ್ನು ಬಿಡಿಸಲಾಗಿದೆ.

	ಕಲ್ಲಿನಲ್ಲಿ ಕಟ್ಟಿದ ಹಿಂದೂ ದೇವಾಲಯಗಳು ಬಲುಮಟ್ಟಿಗೆ ಬೌದ್ಧ ಜೈನ ಧರ್ಮಗಳಿಂದ ಪ್ರಭಾವಿತವಾಗಿ ಚೈತ್ಯ ಸ್ತೂಪಗಳನ್ನು ಮಾದರಿಯಾಗಿಟ್ಟುಕೊಂಡವೆನ್ನಬಹುದು. ಕ್ರಿ. ಪೂ. ಹಾಗೂ ಕ್ರಿ. ಶ. ಎರಡು ಮೂರು ಶತಮಾನಗಳಲ್ಲೇ ಹಿಂದೂ ದೇವಾಲಯಗಳು ರೂಪಗೊಂಡಿದ್ದುವೆನ್ನಲೂ ಆಧಾರಗಳಿವೆ. ಆದರೆ ಇವು ಬೇಗ ನಶಿಸಿಹೋಗುವ ಮರ ಇಟ್ಟಿಗೆಗಳಿಂದ ಕಟ್ಟಲ್ಪಟ್ಟವು. ಅಶೋಕನ ಕಾಲದ ಸಾಂಚಿಯ 40ನೆಯ ಗುಡಿಯ ತಳಪಾಯ ಕಲ್ಲಿನದು. ರಾಜಸ್ಥಾನದ ನಗರೀ ಎಂಬಲ್ಲಿ ಕಾಣಿಸಿಕೊಂಡ ಸಂಕರ್ಷಣ, ವಾಸುದೇವರಿಗೆ ಅಂಕಿತವಾದ ಆಲಯದ ಅವಶೇಷಗಳೂ ವಿದಿಶಾದಲ್ಲಿಯ ಭಾಗವತಾಲಯ ಹಾಗೂ ಅದರ ಮುಂಬದಿಯ ಗರುಡಸ್ತಂಭ ಕೆಲವು ಮಾದರಿಗಳು. ತಕ್ಷಶಿಲೆಯ ಜಂದ್ಯಾಲದಲ್ಲಿ ಕ್ರಿ. ಪೂ. ಸು. 1ನೆಯ ಶತಮಾನದ ಗುಡಿ ಜರತುಷ್ಟ್ರ ಧರ್ಮದ ಲಕ್ಷಣಗಳನ್ನೊಳಗೊಂಡ ಗ್ರೀಕ್ ಮಾದರಿ ಎನ್ನಲಾಗಿದೆ. ಸಾಂಚಿ, ಭಾರ್ಹುತ್, ಅಮರಾವತಿಗಳಲ್ಲಿಯ ವಿಗ್ರಹ ಫಲಕಗಳಲ್ಲಿ ಸಮಕಾಲೀನ ದೇವಾಲಯಗಳ ಮಾದರಿಗಳನ್ನು ಗುರುತಿಸಬಹುದು. ನಾಗಾರ್ಜುನಕೊಂಡದಲ್ಲಿ ಕ್ರಿ. ಶ. 3-4ನೆಯ ಶತಮಾನಗಳಿಗೆ ಸೇರಿದ ದೇವಾಲಯಗಳ ಅವಶೇಷಗಳಿವೆ. ಅವುಗಳಲ್ಲಿ ಕೆಲವು ಪುಷ್ಪಭದ್ರ ಸ್ವಾಮಿ, ಅಷ್ಟಭುಜಸ್ವಾಮಿ. ವಿರೂಪಾಕ್ಷಪತಿ, ಮಹಾಸೇನ ಮುಂತಾದ ದೇವ ದೇವತೆಗಳ ಗುಡಿಗಳು.

	ಕ್ರಿ. ಶ. 4ನೆಯ ಶತಮಾನದ ಅನಂತರ ದೇವಾಲಯಗಳನ್ನು ಕಲ್ಲಿನಲ್ಲಿ ಕಟ್ಟುವ ಪದ್ಧತಿಗೆ ವಿಶೇಷವಾದ ಪ್ರೋತ್ಸಾಹ ಲಭಿಸಿತು. ಗುಪ್ತವಂಶದ ಅರಸರು ನೀಡಿದ ಪ್ರೋತ್ಸಾಹದಿಂದ ಕಟ್ಟಲ್ಪಟ್ಟ ಶಿಲಾಲಯಗಳು ಮಧ್ಯಭಾರತದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿವೆ. ಅನಂತರ ದಕ್ಖನ್ ಹಾಗೂ ದಕ್ಷಿಣ ಭಾರತಗಳಲ್ಲೂ ಇವು ತಲೆಎತ್ತಿದುವು. ಇವು ಬಲುಮಟ್ಟಿಗೆ ಪ್ರಯೋಗಶೀಲ ಕಾಲ. ವಿವಿಧ ಆಕಾರ, ವಿನ್ಯಾಸ, ಅಲಂಕರಣಗಳು ಆಗ ಪ್ರಯೋಗಿಸಲ್ಪಟ್ಟು ಕೊನೆಗೆ ಖಚಿತವಾದ ವಾಸ್ತುಶಿಲ್ಪದ ಕ್ಲುಪ್ತ ಪ್ರಮಾಣಗಳು ರೂಪುಗೊಂಡುವು. ಕಲ್ಲಿನ ದೇವಾಲಯದ ವಾಸ್ತುಶಿಲ್ಪಕ್ಕೆ ವಿಶೇಷವಾದ ಇಂಬುಗೊಟ್ಟವರಲ್ಲಿ ಉತ್ತರ ಭಾರತದಲ್ಲಿ ಗುಪ್ತರು, ದಕ್ಖನ್ ಪ್ರದೇಶದಲ್ಲಿ ಕದಂಬ-ಚಾಳುಕ್ಯರು, ದಕ್ಷಿಣದಲ್ಲಿ ಪಲ್ಲವರು ಬಹುಮುಖ್ಯರಾಗಿದ್ದಾರೆ. ಚೌಕ, ವೃತ್ತ ಮತ್ತು ಕುಂಜರದ ಮೂಲ ನಕಾಸೆಗಳನ್ನನುಸರಿಸಿ ಇಟ್ಟಿಗೆ, ಗಾರೆ, ಕಲ್ಲು ಬಳಸಿ ಆಲಯಗಳನ್ನು ಕಟ್ಟಲಾಯಿತು. ಶೋಲಾಪುರ ಜಿಲ್ಲೆಯ ತೇರ್ (ತಗರ) ಹಗೂ ಕೃಷ್ಣಜಿಲ್ಲೆಯ ಚೇಜರ್ಲಗಳಲ್ಲಿರುವ, ಮೊದಲು ಬೌದ್ಧ ಚೈತ್ಯಗಳಾಗಿದ್ದುವೆನ್ನಲಾದ 5ನೆಯ ಶತಮಾನದ ದೇವಾಲಯಗಳಲ್ಲಿ ಪೀಪಾಯಿ ಆಕಾರದ ಮಾಳಿಗೆ ಮತ್ತು ಮುಂಭಾಗದ ಅಲಂಕರಣಗಳು ಕುತೂಹಲಕಾರಿಯಾಗಿವೆ. ರಾಜಗೃಹದ ಮಣಿನಾಗ ಆಲಯ (ಮಣಿಯರ ಮಠ) ವೃತ್ತಾಕಾರದ್ದು. ವೃತ್ತಾಕಾರದ ನಾಲ್ಕು ದಿಕ್ಕುಗಳಲ್ಲೂ ತೆಟ್ಟೆಯಾದ ಮುಂಚಾಚುಗಳು ಆಂಧ್ರಪ್ರದೇಶದ ಸ್ತೂಪಗಳಲ್ಲಿಯ ಆಯತ ವೇದಿಕೆಗಳನ್ನು ಹೋಲುತ್ತವೆ. ಅಲ್ಲದೆ, ಗೋಡೆಯ ಸುತ್ತಲೂ ಮೂರ್ತಿಶಿಲ್ಪಗಳಿಗಾಗಿ ಗೂಡುಗಳಿದ್ದು ಅವುಗಳಲ್ಲೊಂದರಲ್ಲಿಯ ನಾಗಿನೀ ವಿಗ್ರಹ ಅತಿಪ್ರಾಚೀನ ವಿಗ್ರಹವೆಂದು ಪ್ರಸಿದ್ಧಿಹೊಂದಿದೆ. ಮಧ್ಯಭಾರತದಲ್ಲಿ ಈ ಕಾಲದ ಹಲವಾರು ಆಲಯಗಳಿದ್ದು ಅವನ್ನು ಹೀಗೆ ವಿಂಗಡಿಸಬಹುದು: ಸಣ್ಣದ್ವಾರ ಮಂಟಪದ ಹಿಂದಿನ ಚಪ್ಪಟೆಯಾದ ಮಾಳಿಗೆಯ ಚೌಕಾಕಾರದ ಗುಡಿಗಳು; ಸ್ತಂಭಮಂಟಪಗಳಿಂದ ಸುತ್ತುವರಿದ, ಮೊದಲಂತಸ್ತಿನಲ್ಲೂ ಗರ್ಭಗೃಹವುಳ್ಳ ಚೌಕಾಕಾರದ ಗುಡಿಗಳು; ಜಗತಿಯ ಮೇಲೆ ಕಟ್ಟಿದ ತಗ್ಗಾದ ಶಿಖರದ ಚೌಕಾಕಾರದ ಗುಡಿಗಳು. ಮುಂಡಪ್ರಾಸಾದವೆಂದು ಕರೆಯಲಾದ ಆಲಯಕ್ಕೆ ಸಾಂಚಿಯಲ್ಲಿಯ 17ನೆಯ ದೇವಾಲಯ ಉತ್ತಮ ಮಾದರಿ. ಗುಡಿಯ ಮುಂದಿನ ಕಂಬಗಳು, ಗಂಟೆಯಾಕಾರದ, ವಾಸ್ತವವಾಗಿ ಕೆಳಮುಖ ಮಾಡಿದ ಕಮಲದಾಕಾರದ ಬೋದಿಗೆಗಳನ್ನು ಹೊಂದಿವೆ. ಏರಣದ ಗುಡಿಯ ಗೋಡೆಗಳ ಮಧ್ಯದಲ್ಲಿ ಒತ್ತು ಗೋಡೆಯಂಥ ಮುಂಚಾಚು ಕಾಣಿಸಿಕೊಂಡಿದೆ. ಇಮ್ಮಡಿ ಚಂದ್ರಗುಪ್ತನ ಕಾಲದಿಂದ ವಿದಿಶಾದಲ್ಲಿರುವ ಎರಡು ಇಂಥ ಆಲಯಗಳ ಗರ್ಭಗೃಹ ಮಾತ್ರ ಕಲ್ಲಿನಲ್ಲಿ ಕೊರೆದಿದ್ದು, ಮುಖಮಂಟಪ ಅನಂತರ ಕಟ್ಟಲ್ಪಟ್ಟದ್ದು. ನಾಚ್ನಾ ಕುಠಾರ, ಭೂಮಾರಗಳಲ್ಲಿಯ ಪಾರ್ವತಿ ಮತ್ತು ಶಿವನ ಆಲಯಗಳು, ಐಹೊಳೆಯ ಲಾಡಖಾನ್, ಕೊಂತಿಗುಡಿ, ಮೇಗುಟಿಗಳು 6-7ನೆಯ ಶತಮಾನದವು. ಇವುಗಳ ಗರ್ಭಗುಡಿಯನ್ನಾವರಿಸಿ ಇನ್ನೊಂದು ಸುತ್ತುಗಟ್ಟು ಗೋಡೆ ಇದ್ದು ಅದರ ಒಳಭಾಗದಲ್ಲಿ ಬೆಳಕು ಬರಲೆಂದು ಜಾಲಂಧ್ರಗಳನ್ನು ಅಳವಡಿಸಿದೆ. ಇದರಿಂದ ಗರ್ಭಗುಡಿಯನ್ನು ಸುತ್ತಿ ಬರಬಹುದಾಗಿದ್ದು ಇವು ಸಾಂಧಾರ ಗುಡಿಗಳೆನಿಸಿಕೊಂಡಿವೆ. ಅನಂತರದ ಶತಮಾನಗಳಲ್ಲಿ ಈ ಶೈಲಿಯ ಅತ್ಯುತ್ಕøಷ್ಟ ಮಾದರಿಗಳನ್ನು ತಂಜಾವೂರಿನ ಬೃಹದೀಶ್ವರಾಲಯ ಹಾಗೂ ಖಜುರಾಹೋದ ಕಂದರಿಯ ಮಹಾದೇವಾಲಯಗಳಲ್ಲಿ ಕಾಣಬಹುದು. ನಾಚ್ನಾಕುಠಾರದ ಶಿವಾಲಯ ಮತ್ತು ಐಹೊಳೆಯ ಲಾಡಖಾನ್ ದೇವಾಲಯಗಳಲ್ಲಿ ಮೊದಲಂತಸ್ತಿನಲ್ಲಿ ಇನ್ನೊಂದು ಗರ್ಭಗುಡಿಯಿದೆ. ಅನಂತರದ ದ್ರಾವಿಡ ಶೈಲಿಯ ಅಂತಸ್ತಿನ ಕಟ್ಟಡಗಳ ಆಲಯಗಳಿಗೆ ಇವು ಮಾದರಿಗಳು, ಭೂಮಾರದಲ್ಲಿ ಮೆಟ್ಟಲುಗಳ ಎರಡೂ ಬದಿಗಳಲ್ಲಿ ಉಪಗುಡಿಗಳಿವೆ. ಅನಂತರದ ಪಂಚಾಯತನ ಅಥವಾ ಅಷ್ಟಪರಿವಾರ ದೇವಾಲಯಗಳಿಗೆ ಇದು ಎಡೆಮಾಡಿಕೊಟ್ಟಂತಿದೆ. ಲಾಡಖಾನ್‍ದಲ್ಲಿ ಹಿಂದಿನ ಗೋಡೆಗೆ ಹೊಂದಿದಂತಿರುವ ಗರ್ಭಗೃಹ ಕಲ್ಲಿನಲ್ಲಿ ಕಡೆದ ವಿಹಾರಗಳಲ್ಲಿ ಹಿಂಬದಿಯ ಗೋಡೆಯಲ್ಲಿ ಕೊರೆದ ಗರ್ಭ ಕೊಠಡಿಯಿಂದ ಸ್ಫೂರ್ತಿ ಪಡೆದದ್ದು. ಈ ಘಟ್ಟಕ್ಕೆ ಸೇರಿದ ದೇವಾಲಯ ಮೇಗುಟಿ. 634ರಲ್ಲಿ ಅಸ್ತಿತ್ವಕ್ಕೆ ಬಂದ ಇದರ ಗರ್ಭಗುಡಿಯ ಸುತ್ತುವರಿದು ಚಾವಣಿ ಹಾದಿ ಹಾಗೂ ಸ್ತಂಭಮಂಟಪಗಳಿದ್ದು ಇವೆರಡನ್ನೂ ಅಂತರಾಳವೊಂದು ಕೂಡಿಸಿದೆ. ಗೋಡೆಗಳ ಮಧ್ಯೆ ಅಲ್ಲಲ್ಲಿ ಅಲಂಕೃತ ಗೋಡೆಗಂಬಗಳಿವೆ. ಇದರ ಮುಂದಿನ ಘಟ್ಟಕ್ಕೆ ಸೇರಿದ ಆಲಯಗಳ ಮಾಳಿಗೆಯ ಮೇಲೆ ವಕ್ರರೇಖಾಕೃತಿಯ ಶಿಖರ ಅಥವಾ ಮೇಲ್ಕಟ್ಟಡ ಕಾಣಿಸಿಕೊಂಡಿದೆ. ಇವು ನಾಗರಶೈಲಿಯ ಪ್ರಾಚೀನ ಮಾದರಿಗಳು. ಇವನ್ನು ಶಿಖರ ದೇವಾಲಯಗಳೆಂದೇ ಕರೆದಿದೆ. ಜಾನ್ಸಿ ಜಿಲ್ಲೆಯಲ್ಲಿರುವ, 6ನೆಯ ಶತಮಾನಕ್ಕೆ ಸೇರಿದ ದೇವಘಡದ ದಶಾವತಾರ ಗುಡಿ ಇದಕ್ಕೊಂದು ಪ್ರಾಚೀನ ನಿದರ್ಶನ. ಎತ್ತರದ ಜಗುಲಿಯ ಮೇಲೆ ಇಂಥ ದೇವಾಲಯಗಳನ್ನು ಕಟ್ಟಿರುವುದೊಂದು ವೈಶಿಷ್ಟ್ಯ. ದೇವಘಡದ ಆಲಯವನ್ನು ದೊಡ್ಡ ಕಲ್ಲುದಿಮ್ಮಿಗಳನ್ನು ಬಳಸಿ ಕಟ್ಟಲಾಗಿದೆ. ಇದರ ಜಗಲಿಯ ನಾಲ್ಕೂ ಕಡೆಗಳಲ್ಲಿ ಒಂದೊಂದು ಮೆಟ್ಟಲು ಇದೆ. ಅಧಿಷ್ಠಾನದಲ್ಲಿ ರಾಮಾಯಣ, ಭಾಗವತಗಳಿಂದ ಆಯ್ದ ಕಥಾ ಭಾಗಗಳ ಚಿತ್ರಫಲಕಗಳಿವೆ. ಗುಡಿಯ ದ್ವಾರಬಂಧಗಳನ್ನು ಶಾಖಾಲಂಕರಣಗಳು, ಕಿರಿದಾದ ಮೂರ್ತಿ ವಿಗ್ರಹಗಳು ಅಲಂಕರಿಸಿವೆ. ಇನ್ನುಳಿದ ಮೂರು ಗೋಡೆಗಳಲ್ಲಿ ಗೋಡೆಗಂಬಗಳ ನಡುವೆ ಗೂಡುಗಳಿವೆ. ಒಂದೊಂದರಲ್ಲೂ ಸುಂದರವಾಗಿ ಕೆತ್ತಿದ ವಿಗ್ರಹ ಇವೆ. ಗುಡಿಯ ಮೇಲೆ ಮೆಟ್ಟಲು ಮೆಟ್ಟಲಾಗಿ ಮೇಲೇರುವ ನಾಲ್ಕು ಮೂಲೆಗಳಲ್ಲಿ ಒಂದೊಂದು ಹಾಗೂ ಮೇಲ್ಭಾಗದಲ್ಲಿ ಆಮಲಕಗಳಿದ್ದ ಒಂದು ಲತಿನ ಜಾತಿಯ ವಿಮಾನವಿದ್ದಿತಾದರೂ ಅದು ಈಗ ಭಗ್ನವಾಗಿದೆ. ಭೀತರಗಾಂವ್‍ನ ಇಟ್ಟಿಗೆಯಲ್ಲಿ ಕಟ್ಟಿದ ದೇವಾಲಯ ಸಹ ಜಗತಿಯ ಮೇಲಿದೆ. ಚೌಕಾಕಾರದ ತಳಕಟ್ಟು ನಕ್ಷೆಯ ಈ ಗುಡಿಗುಮ್ಮಟಾಕಾರವಾಗಿದ್ದು, ಮುಂದೆ ಒಂದು ಅಂತರಾಳ ಹಾಗೂ ಕಂಬಸಾಲಿನ ಮುಖಮಂಟಪವನ್ನು ಹೊಂದಿದೆ. ಗೋಡೆಗಳನ್ನು ಮಧ್ಯೆ ಮಧ್ಯೆ ಅಲಂಕೃತ ಗೋಡೆಗಂಬಗಳುಳ್ಳ ಗಟ್ಟಿಮಣ್ಣಿನ ಫಲಕಗಳು ಅಲಂಕರಿಸಿವೆ. ಗುಡಿಯ ಮೂರು ಗೋಡೆಗಳ ಮಧ್ಯದ ಮಂಚಾಚನ್ನು ಮೇಲಿನವರೆಗೂ ಎಬ್ಬಿಸಲಾಗಿದ್ದು ಇದು ಗುಡಿಗೆ ತ್ರಿರಥ ರೂಪವನ್ನು ನೀಡಿದೆ. ಇವನ್ನು ಗಮನಿಸಿದಾಗ ಶಿಲುಬೆಯ ವಿನ್ಯಾಸದ ರೇಖಾಶಿಖರಗಳ ನಾಗರ ಹಾಗೂ ಚೌಕಾಕೃತಿಯ ಗುಡಿಯ ಮೇಲೆ ಗೋಪುರಾಕೃತಿಯ ಶಿಖರದ ದ್ರಾವಿಡ ಶೈಲಿಗಳು ಆಗ ರೂಪುಗೊಳ್ಳುತ್ತಿದ್ದುವೆಂದು ಭಾವಿಸಬಹುದು.

	ವಾಸ್ತುಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ನಾಗರ, ದ್ರಾವಿಡ ಮತ್ತು ವೇಸರವೆಂಬ ಮೂರು ಮುಖ್ಯ ಶೈಲಿಗಳ ಪ್ರಸ್ತಾಪವಿದೆ. ಚಾಳುಕ್ಯರ ಶಾಸನವೊಂದರಲ್ಲಿ ಈ ಮೂರರ ಜೊತೆಗೆ ಕಲಿಂಗ ಶೈಲಿಯ ಪ್ರಸ್ತಾಪವೂ ಇದೆ. ವೇಸರಕ್ಕೆ ಬದಲಾಗಿ ವಾರಾಟ ಎಂಬ ಹೆಸರು ಕೆಲವು ಗ್ರಂಥಗಳಲ್ಲಿ ಕಾಣಿಸಿಕೊಂಡಿದೆ. ವೇಸರ ಎಂಬ ಶಬ್ದ ಮಿಶ್ರಣವನ್ನು ಸೂಚಿಸುತ್ತದೆ. ಇದರಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳ ಪ್ರಮುಖ ಲಕ್ಷಣಗಳನ್ನು ಅಳವಡಿಸಿಕೊಳ್ಳಲಾಗಿದೆ ಇವು ಸಾಮಾನ್ಯವಾಗಿ ಪ್ರಾದೇಶಿಕ ಶೈಲಿಗಳೆಂದೂ ಭಾವಿಸಲಾಗಿದೆ. ನಾಗರ ಮಧ್ಯಪ್ರದೇಶದ, ದ್ರಾವಿಡ ದಕ್ಷಿಣಭಾರತದ, ವಾರಾಟ ಬೀರಾರಿನ, ಕಲಿಂಗ ಒರಿಸ್ಸ ಪ್ರದೇಶದ ಶೈಲಿಗಳು. ವಿಂಧ್ಯದ ದಕ್ಷಿಣಕ್ಕೆ ಕೃಷ್ಣಾ ನದಿಯವರೆಗಿನ ಪ್ರದೇಶದ ಶೈಲಿಯನ್ನು ವೇಸರವೆಂದು ಗುರುತಿಸಲಾಗಿದೆ. ಆದರೆ ಈ ಭಿನ್ನ ಶೈಲಿಗಳು ಆಯಾ ಪ್ರದೇಶಗಳಿಗಷ್ಟೆ ಸೀಮಿತವಾಗಿರಲಿಲ್ಲವೆಂಬುದು ತಿಳಿದ ವಿಷಯವೇ. ಲಂಬಕವಾಗಿ ಗುಡಿಯನ್ನು ಪಿಷ್ಟ (ಅಧಿಷ್ಠಾನ), ಬಾಡ, ಗಂಡಿ (ಶಿಖರ) ಮತ್ತು ಮಸ್ತಕವೆಂದು ವಿಂಗಡಿಸಬಹುದು. ಪಿಷ್ಟ ತಳಪಾಯಕ್ಕೆ ಅನ್ವಯಿಸಿದುದು. ದಕ್ಖನ್ನಿನ ಹೊಯ್ಸಳ ಶೈಲಿಯ ಗುಡಿಗಳಲ್ಲಿ ಇದಕ್ಕೂ ಕೆಳಗೆ ಸಾಮಾನ್ಯವಾಗಿ ಜಗಲಿ ಇರುತ್ತದೆ. ಗುಡಿಯನ್ನಾವರಿಸಿದ ಗೋಡೆಯ ಭಾಗ ಬಾಡ. ಬಾಡವನ್ನು ಕೆಳಗಿನಿಂದ ಪಾಭಾಗ, ಜಂಘ ಮತ್ತು ಬರಾಂಡಗಳೆಂದು ವಿಭಜಿಸಲಾಗಿದೆ. ಉತ್ತರಭಾರತದ ಕೆಲವು ದೇವಾಲಯಗಳು ಬಾಡದಿಂದಲೇ ಮೇಲೆದ್ದಿವೆ. ಇದರ ಮೇಲಿನ ಭಾಗ ಶಿಖರ. ಈ ಮೇಲ್ಕಟ್ಟಡ ಬಾಗಿದ ರೇಖಾಕೃತಿಯಲ್ಲಿ ಅಥವಾ ಪಿರಮಿಡ್ಡಿನಾಕಾರದಲ್ಲಿ ಇದ್ದು ಈ ಆಕಾರವನ್ನವಲಂಬಿಸಿ ಸಮಗ್ರ ದೇವಾಲಯವನ್ನು ರೇಖಾ ದೇವಾಲಯ (ದೇಉಲ್) ಅಥವಾ ಪೀಡಾ (ಭದ್ರ) ದೇವಾಲಯ ಎಂದು ಗುರುತಿಸಿದೆ. ಶಿಖರದ ಮೇಲಿನ ತುದಿಯ ಭಾಗ ಮಸ್ತಕ, ಬಾಡ ಮತ್ತು ಗಂಡಿಗಳು ಕೂಡುವಲ್ಲಿ ಬರಾಂಡ ಎಂಬ ಒಂದು ಭಾಗವಿರುತ್ತದೆ. ಗಂಡಿಯನ್ನು ಹಲವಾರು ಸಮತಲವರಿಸೆಗಳಾಗಿ ವಿಭಜಿಸಿದ್ದು ಅವನ್ನು ಭೂಮಿಗಳೆಂದು ವ್ಯವಹರಿಸಲಾಗಿದೆ. ಒಂದೊಂದರ ಮೂಲೆಯಲ್ಲೂ ಒಂದೊಂದು ಉಬ್ಬಿದ ಅಡ್ಡಪಟ್ಟಿಗಳ ಆಮಲಕವೆಂಬ ಶಿಲೆ-ಇವು ಭೂಮಿ ಆಮ್ಲಗಳು. ಗುಡಿಯ ಮೇಲೆ ಹಿರಿಯ ಗಾತ್ರದ ಇಂಥದೇ ಆಮಲಕ. ಇದರ ಕೆಳಭಾಗಕ್ಕೆ ಗ್ರೀವ ಎಂದು ಹೆಸರು. ರೇಖಾ ದೇವಾಲಯದಲ್ಲಿ ಗಂಡಿಯ ಸಾಲು ಮೇಲ್ಭಾಗದಲ್ಲಿ ಒಳಕ್ಕೆ ಬಾಗಿರುತ್ತದೆ.

	ಉತ್ತರಭಾರತದ ದೇವಾಲಯಗಳನ್ನು ಪ್ರಾದೇಶಿಕವಾಗಿ ಪರಿಶೀಲಿಸಬಹುದು. ನಾಗರ ಶೈಲಿಯ ದೇವಾಲಯಗಳು ವಿಶೇಷವಾಗಿ ಒರಿಸ್ಸಾದಲ್ಲಿ 7-13ನೆಯ ಶತಮಾನಗಳ ಅವಧಿಯಲ್ಲಿ ನಿರ್ಮಾಣಗೊಂಡಿವೆ. ಭುವನೇಶ್ವರದಲ್ಲಿಯ ಶತ್ರುಘ್ನೇಶ್ವರ ದೇವಾಲಯ 7ನೆಯ ಶತಮಾನದ ಪ್ರಾಚೀನ ಮಾದರಿ. ಇವುಗಳ ಶಿಖರಗಳು ಗುತ್ತನಾದ ತುದಿಯ ಹೊರರೇಖೆಯ ಶಿಖರಗಳನ್ನು ಹೊಂದಿರುತ್ತದೆ. ಸ್ವಲ್ಪ ಮಟ್ಟಿಗೆ ದೇವಘಡದ ದಶಾವತಾರ ದೇವಾಲಯವನ್ನು ಹೋಲುತ್ತದೆ. 8ನೆಯ ಶತಮಾನದ ಪರಶುರಾಮೇಶ್ವರಾಲಯ ಒಂದು ಕಿರಿದಾದ ತ್ರಿರಥ. ಗರ್ಭಗೃಹ 12.1 ಮೀ ಎತ್ತರವಿದೆ; ಮಂಟಪವನ್ನೂ ಕೂಡಿಸಿ 12.6 ಮೀ ಉದ್ದವಿದೆ. ದೊಡ್ಡ ಗಾತ್ರದ ಕಲ್ಲುಗಳನ್ನು, ಗಾರೆಯ ಸಹಾಯವಿಲ್ಲದೆ ಹೊರಚಾಚಿದ ಚಪ್ಪಟೆಯ ಅಂಚುಗಳು ಪರಸ್ಪರ ತೊಡರಿಕೊಳ್ಳುವುದರ ಮೂಲಕ ಬಿಗಿಯಾಗುವಂತೆ ಕೂರಿಸಿ ಕಟ್ಟಲ್ಪಟ್ಟ ಕಟ್ಟಡ. ಪಾಭಾಗದಲ್ಲಿ ಅಲಂಕೃತ ಅಚ್ಚುಪಟ್ಟಿಗಳಿರುತ್ತವೆ. ಒಂದೊಂದು ಮುಖದ ಜಂಘಭಾಗದಲ್ಲೂ ಮೂರು ಮೂರು ಮಾಡಗಳಿವೆ (ಗೂಡು). ಬರಾಂಡದಲ್ಲಿ ಮಿಥುನ ವಿಗ್ರಹಗಳನ್ನು, ಚದುರಂಗ ಮಣೆಯ ವಿನ್ಯಾಸಗಳನ್ನು ಕೆತ್ತಿದ ಅಲಂಕಾರ ಪಟ್ಟಿಗಳು ಇರುತ್ತವೆ. ಪಾಗದ ಮೂಲೆಗಳಲ್ಲಿಯ (ಕೋನಕ ಪಾಗ) ಐದು ಭೂಮಿ ಆಮ್ಲಗಳು ಈ ಗಂಡಿ ಐದು ಅಂತಸ್ತುಗಳದೆಂಬುದನ್ನು ಸೂಚಿಸುತ್ತವೆ. ಗರ್ಭಗುಡಿಯ ಮುಂದಿನ ಜಗಮೋಹನ ಎಂದು ಕರೆಯಲಾದ ಮಂಡಪ ಅನಂತರದ ಕಾಲದ್ದು. ಮೂರು ಕಂಬಗಳ ಎರಡು ಸಾಲುಗಳು ಒಳಗೆ ಮಾಳಿಗೆಯನ್ನಾಧರಿಸಿವೆ. ಇದಕ್ಕೆ ಮೂರು ದ್ವಾರಗಳು, ಜಾಲಂಧ್ರಗಳು ಇವೆ. ಈ ಜಗಮೋಹನದಲ್ಲಿರುವ ಮೂರ್ತಿಶಿಲ್ಪಗಳು ಅವುಗಳ ಮೋಹಕ ಭಂಗಿ, ನಮ್ರವಾದ ರೇಖೆ ಹಾಗೂ ಸಂಯಮಶೀಲ ಅಲಂಕರಣೆಗಳಿಗೆ ಮಾದರಿಗಳಾಗಿವೆ. ಅನಂತರದ ಶತಮಾನಗಳಲ್ಲಿ ದೇವಾಲಯಗಳಲ್ಲಿ ವಿಸ್ತಾರವಾದ ಅಲಂಕಾರ, ನಾಜೂಕು, ಸರಳವಾದ ನಕ್ಷೆ, ಎತ್ತರದಲ್ಲಿ ವೃದ್ಧಿ ಹಾಗೂ ಹೆಚ್ಚಿನ ಮಂಟಪಗಳ ಜೋಡಣೆಗಳನ್ನು ಗುರುತಿಸಬಹುದು. ಅಲ್ಲದೆ ಸುತ್ತಲೂ ಕಿರುದೇವಾಲಯಗಳು ಕಾಣಿಸಿಕೊಂಡವು. ಬಾಡವನ್ನು ಈಗ ಐದು ಭಾಗಗಳಾಗಿ ವಿಂಗಡಿಸಲಾಯಿತು. ಜಂಘದಲ್ಲಿ ತಲಜಂಘ ಮತ್ತು ಉಪರ ಜಂಘ ಎಂಬ ಪ್ರಭೇದಗಳನ್ನು ರೂಪಿಸಿ ಬಾಂಧನವೆಂಬ (ಬಂಧ) ಹೊಸಭಾಗವನ್ನು ಅಳವಡಿಸಲಾಯಿತು. ಪಾಭಾಗ ಮತ್ತು ಬರಾಂಡಗಳ ಪಟ್ಟಿಗಳ ಗಂಡಿಯ ಭೂಮಿಗಳ ಸಂಖ್ಯೆಯೂ ಹೆಚ್ಚಿತು. ಬಾಡದ ಹೊರ ಮೂಲದ ವಾಸ್ತು ಮತ್ತು ಶಿಲ್ಪಗಳ ವಿನ್ಯಾಸವೂ ವಿಸ್ತಾರಗೊಂಡವು. ಭುವನೇಶ್ವರ ಲಿಂಗರಾಜ, ಪುರಿಯ ಜಗನ್ನಾಥ ದೇವಾಲಯಗಳು ಕಲಿಂಗ ಶೈಲಿಗೆ ಸೇರಿದುವೆನ್ನಲಾದ ಒರಿಸ್ಸದ ದೇವಾಲಯಗಳಲ್ಲಿ ಸುಪ್ರಸಿದ್ಧವಾದವು. ಅತ್ಯಂತ ಉತ್ತಮವಾದ, ಗಾತ್ರದಲ್ಲಿ ಹಿರಿದಾದ, ಪ್ರಾತಿನಿಧಿಕವಾದ ಲಿಂಗರಾಜ ದೇವಾಲಯ ಸುಮಾರು 49ಮೀ ಎತ್ತರವಿದೆ. ಪೂರ್ವಾಭಿಮುಖವಾಗಿರುವ ದಪ್ಪ ಗೋಡೆಗಳ ಪ್ರಾಕಾರದೊಳಗೆ ದೀರ್ಘ ಚತುರಸ್ರಾಕಾರದ ಅಂಗಳದಲ್ಲಿ ಹಲವಾರು ಕಿರಿಯ ಕಟ್ಟಡಗಳಿವೆ. ಮೂಲ ಗರ್ಭಗೃಹದ ಮುಂದೆ ಕ್ರಮವಾಗಿ ಜಗಮೋಹನ, ನಟಮಂದಿರ ಮತ್ತು ಭೋಗ ಮಂದಿರಗಳಿವೆ. ಗರ್ಭಗುಡಿಯ ಮೇಲೆ ವಕ್ರರೇಖೆಯ ಶಿಖರಗಳಿವೆ. ಮೂರು ಕಡೆಯ ಮಧ್ಯದ ಮುಂಚಾಚುಗಳು ಚಾವಣಿಯುಳ್ಳ ಕಿರುಗುಡಿಗಳಾಗಿ ಏರ್ಪಟ್ಟಿವೆ. ಗರ್ಭಗೃಹದಲ್ಲಿ ಭುವನೇಶ್ವರವೆಂಬ ಹೆಸರಿನ ಲಿಂಗವಿದೆ. ಪಕ್ಕದ ಮೂರು ಗುಡಿಗಳಲ್ಲಿ ಪಾರ್ವತಿ, ಕಾರ್ತಿಕೇಯ ಮತ್ತು ಗಣೇಶನ ವಿಗ್ರಹಗಳಿವೆ. ವಿಸ್ಮಯಕರವಾದ ಅದ್ಭುತ ಶಿಖರ ಹಲವಾರು ಕಿಮೀ ನೋಟ ಪಡೆದಿದೆ. ಭಾರವಾದ ಆಮಲಕ ಶಿಲೆಯನ್ನು ಮೂಲೆಗಳಲ್ಲಿರುವ ಸಿಂಹಗಳು ಹೊತ್ತು ಕುಳಿತಿವೆ. 30.5 ಮೀ. ಎತ್ತರದ ಜಗಮೋಹನದ ಮೇಲೆ ಪಿರಮಿಡ್ಡಾಕೃತಿಯ ಸಮತಲದ ಎರಡು ವರಿಸೆಗಳ ಮೇಲ್ಕಟ್ಟಡವಿದೆ. ಮೇಲ್ಭಾಗದಲ್ಲಿ ವೃತ್ತಾಕಾರದ ಬೆಂಕಿಯ ಮೇಲೆ, ಆಮಲಕ ಶಿಲೆಯನ್ನು ಹೊತ್ತ ಘಂಟಾಕೃತಿಯ ಘಟಕವಿದೆ. ತುದಿಯಲ್ಲಿ ಕಲಶವಿದೆ. ನಟಮಂದಿರ ಹಾಗೂ ಭೋಗ ಮಂದಿರಗಳು ಅನಂತರ ಜೋಡಿಸಲ್ಪಟ್ಟ ಭಾಗಗಳು. ಈ ಆಲಯದ ಕಾಲಕ್ಕೆ ಸುಮಾರು 12ನೆಯ ಶತಮಾನದ ಆರಂಭದಲ್ಲಿ ಅಸ್ತಿತ್ವಕ್ಕೆ ಬಂದುದು ಪುರಿಯ ಜಗನ್ನಾಥಾಲಯ. ಈ ಆಲಯಕ್ಕೆ ಎರಡು ಪ್ರಾಕಾರಗಳಿರುವುದೊಂದು ವೈಶಿಷ್ಟ್ಯ. ಆದರೆ ಈ ಆಲಯ ಆಗಿಂದಾಗ್ಗೆ ಜೀರ್ಣೋದ್ಧಾರಕ್ಕೊಳಪಟ್ಟಿರುವ ಕಾರಣದಿಂದ ಇದರ ಮೊದಲಿನ ಸೌಂದರ್ಯ, ಗಾಂಭಿರ್ಯಗಳು ಈಗ ಕಾಣದಾಗಿವೆ. ಕಳಿಂಗ ಗಂಗ ಮನೆತನದ ಮೊದಲನೆಯ ನರಸಿಂಹ (1238-64) ಕಟ್ಟಿಸಿದ ಕೋಣಾರ್ಕದ ಸೂರ್ಯಾಲಯ ಇನ್ನೊಂದು ಮಹತ್ತ್ವಪೂರ್ಣ ಕಟ್ಟಡ. ಸಪ್ತಾಶ್ವಗಳಿಂದ ಎಳೆಯಲ್ಪಟ್ಟ ದೊಡ್ಡ ರಥದ ಆಕಾರದಲ್ಲಿರುವ ಈ ಆಲಯದ ಗರ್ಭಗೃಹ ಜಗಮೋಹನಗಳು ಎತ್ತರದ ಜಗುಲಿಯ ಮೇಲಿವೆ. 295 ಸೆಂಮೀ ವ್ಯಾಸದ, 20 ಸೆಂಮೀ ಆಳದ ನೇಮಿಯ, 28 ಸೆಂಮೀ ಮುಂಚಾಚಿದ ಅಚ್ಚಿನ, 16ಅರೆಗಳ ರಥದ ಗಾಲಿಗಳು ಜಗುಲಿಯ ಕೆಳಗೆ ಕೊರೆದ ಆನೆಗಳ ಚಿತ್ರಗಳನ್ನು ಮುಚ್ಚಿದಂತಿವೆ. ಒಟ್ಟು 12 ಜೋಡಿಯ ಗಾಲಿಗಳಿವೆ. ಗರ್ಭಗೃಹದ ಮೇಲಿದ್ದ ಶಿಖರ ಈಗ ಇಲ್ಲ. ಜಗಮೋಹನ ಮೂರು ವರಿಸೆಗಳಲ್ಲಿಯ ಪಿರಮಿಡ್ಡಾಕೃತಿಯ ವಿನ್ಯಾಸ ಪಡೆದಿದೆ. ಪೋತಲಗಳೆಂದು ಕರೆಯಲಾದ ಈ ವರಿಸೆಗಳಲ್ಲಿ ಉತ್ತಮವಾದ ಶಿಲ್ಪಗಳನ್ನು ಅಳವಡಿಸಲಾಗಿದೆ. ನಟಮಂಟಪ, ಭೋಗಮಂಟಪಗಳು ಮೂಲಕಟ್ಟಡದಿಂದ ಬೇರೆಯಾಗಿವೆ. ಈ ತನಕ ಇವೆಲ್ಲ ಭಾಗಗಳೂ ಒಂದಾಗಿದ್ದು ಈಗ ಇವನ್ನು ಪ್ರತ್ಯೇಕಗೊಳಿಸಿರುವುದೊಂದು ವೈಶಿಷ್ಟ್ಯ. ಎತ್ತರದ ಚೌಕಾಕಾರದ ವೇದಿಕೆಯ ಮೇಲಿನ ನಟಮಂದಿರಕ್ಕೆ ನಾಲ್ಕು ಕಡೆಗಳಿಂದಲೂ ಮೆಟ್ಟಲುಗಳಿವೆ. ಒಂದೊಂದರಲ್ಲೂ ಸತ್ತ್ವಪೂರಿತ ಗಜಸಿಂಹಾಕೃತಿಯ ಶಿಲ್ಪಗಳಿವೆ. ಈ ದೇವಾಲಯಕ್ಕೂ ಹಿಂದಿನ ಕಾಲದ ಭುವನೇಶ್ವರದ ವೈತಾಲ್ ದೇಉಲ್ ಅಸಾಧಾರಣವಾದ ವಾಸ್ತು ಲಕ್ಷಣವುಳ್ಳದ್ದು. ಮೇಲೆ ಅರೆಗೊಳವಿಯಾಕಾರದ ಗೊಮ್ಮಟದ ಚಾವಣಿಯುಳ್ಳ ಆಯಾಕಾರದ ಗರ್ಭಗೃಹ ಮತ್ತು ಮುಂದೆ ಮಂಟಪವಿದ್ದು, ಇದರ ನಾಲ್ಕು ಮೂಲೆಗಳಲ್ಲೂ ವಕ್ರರೇಖೆಯ ತ್ರಿರಥಶಿಖರದ ಉಪಗುಡಿಗಳಿವೆ. ಹಿಂಬದಿಯ ಉದ್ದನೆಯ ಗೋಡೆಯಲ್ಲಿ ಅವುಗಳ ಐದು ಗೋಡೆಗಂಬಗಳಿದ್ದು ಅಲಂಕೃತ ಗೂಡುಗಳಿವೆ. ಮೇಲೆ ಭಾರವಾದ ಚಾಚು ಪೀಠಗಳನ್ನು ಒಂದರ ಬೆನ್ನಿಗೆ ಇನ್ನೊಂದನ್ನು ಆನಿಸಿದ ಗಜಸಿಂಹಗಳಿವೆ. ಕಿರಿದಾದ ಗೋಡೆಗಳ ಮೂಲೆಗಳಲ್ಲಿ ಒಂದೇ ಮಾದರಿಯ ಗೋಡೆಗಂಬಗಳಿವೆ. ಮಧ್ಯದಲ್ಲಿ ಎರಡು ಅಲಂಕೃತ ಗೋಡೆಗಂಬಗಳ ನಡುವೆ ಹಿಂಜರಿದ ಗೂಡಿನಲ್ಲಿ ಒಂದು ಗೋಡೆಯ ಬದಿಯಲ್ಲಿ ಲಕುಲೀಶನ ಹಾಗೂ ಇನ್ನೊಂದು ಬದಿಯಲ್ಲಿ ಹರಿಹರನ ವಿಗ್ರಹಗಳು ಇವೆ. ಇವೆಲ್ಲವನ್ನೂ ಕೂಡಿಸುವಂತೆ ಮೇಲ್ಭಾಗದಲ್ಲಿ ಚೈತ್ಯ ಕಿಟಕಿಯಿದೆ. ಶಿಖರದ ಪೂರ್ವಮುಖದಲ್ಲಿ ವಿಶಿಷ್ಟವಾಗಿ ಅಲಂಕರಿಸಲ್ಪಟ್ಟ ಎಂಟು ಚಾಚಿದ ಇಳಿಜಾರು ಚಾವಣಿಯ ಚೈತ್ಯಗಳಿದ್ದು ಒಂದರಲ್ಲಿ ನಟೇಶನ ಮತ್ತು ಅದರ ಕೆಳಗಿನದರಲ್ಲಿ ಸಪ್ತಾಶ್ವರಥವನ್ನೇರಿದ ದ್ವಿಭುಜ ಸೂರ್ಯನ ವಿಗ್ರಹಗಳಿವೆ. ಈ ಗೋಡೆಗಂಬಗಳ ಅಲಂಕರಣ ಒಂದು ವಿಶಿಷ್ಟ ಅಂಶ.

	ಪಶ್ಚಿಮಭಾರತದಲ್ಲಿ ಗುಜರಾತಿನಲ್ಲಿ ಆಳಿದ ಸೋಲಂಕಿ ಮನೆತನದ ಅರಸರ ಕಾಲದಲ್ಲಿ ನಾಗರಶೈಲಿಯ ಪ್ರಾದೇಶಿಕ ಬೆಳೆವಣಿಗೆಗೆ ಮಹತ್ತ್ವಪೂರ್ಣ ಪ್ರೋತ್ಸಾಹ ಲಭಿಸಿತು. ಸೌರಾಷ್ಟ್ರದ ಜಾಮ್ ನಗರ ಜಿಲ್ಲೆಯ ಗೋಪ್‍ನಲ್ಲಿ 6-7ನೆಯ ಶತಮಾನದಷ್ಟು ಹಿಂದಿನ ದೇವಾಲಯದ ಅವಶೇಷಗಳಿವೆ. ಅಳಿದುಳಿದ ಇಲ್ಲಿಯ ಆಲಯ ಮೆಟ್ಟಲು ದಿಬ್ಬದಂತೆ ಕಾಣುತ್ತದೆ. ಅತಿ ಕೆಳಗಿನ ದಿಬ್ಬದ ಜಗಲಿಯಲ್ಲಿ ಹಲವಾರು ಮುಂಜರಿತಗಳೂ ಹಿಂಜರಿತಗಳೂ ಇದ್ದು ಮಧ್ಯದ ಜಗಲಿಯ ಹೊರ ಗೋಡೆಗಟ್ಟು ಅಲಂಕೃತವಾಗಿದೆ. ಮೇಲಿನ ಜಗಲಿಯ ಆಲಯ ಮೂಲತಃ ಸಾಂಧಾರ. ಈಗ ಅದರ ಪ್ರದಕ್ಷಿಣಾಪಥ ಇಲ್ಲ. ಆಲಯ ಮೆಟ್ಟಲು ಮೆಟ್ಟಲಿನ ಪಿರಮಿಡ್ಡಾಕೃತಿಯ ಇಳಿಜಾರು ಚಾವಣಿಯನ್ನು ಹೊಂದಿದೆ. ಇವುಗಳಲ್ಲಿ ಕ್ರಮೇಣ ಸಂಖ್ಯೆಯಲ್ಲಿ ಕಡಿಮೆಯಾಗುತ್ತಾ ಹೋಗುವ ಚೈತ್ಯಾಕಾರದ ಕಿಟಕಿಗಳಿವೆ. ಇದು ಈ ಆಲಯದ ವೈಶಿಷ್ಟ್ಯ. ಜುನಾಗಢ ಜಿಲ್ಲೆಯ ವಿಸವಡ, ಖಿಮೇಶ್ವರಗಳಲ್ಲಿಯೂ ನಾಲ್ಕು ಅಂತಸ್ತಿನ ಚಾವಣಿಯ, ಚೈತ್ಯ ಕಿಟಕಿಗಳ ಇಂಥದೇ ಆಲಯಗಳು ಕಂಡುಬಂದಿವೆ. ಪ್ರಭಾಸಪಟ್ಟಣದ ಸಮೀಪದಲ್ಲಿ ಕಡ್ವರ್‍ನಲ್ಲಿಯ ವರಾಹಾಲಯ ಸುಮಾರು 7ನೆಯ ಶತಮಾನದ್ದು. ವಿಸ್ತಾರ ರಚಾನಾಕ್ರಮದ ಈ ಆಲಯ ಸಾಂಧಾರ. ಮುಂದೆ ಮುಚ್ಚಿದ ಕೈಸಾಲೆ ಹಾಗೂ ಮುಖಮಂಟಪಗಳಿವೆ. ಚೈತ್ಯಾಲಂಕಾರವಾದ ಮಾಳಿಗೆಯಲ್ಲಿ ಭಿನ್ನ ಶೈಲಿಯ ಎರಡಂತಸ್ತಿನ ಇಳಿಜಾರು ಮಾಳಿಗೆಯನ್ನು ಅಳವಡಿಸಲಾಗಿದೆ. ಠಾಣದಲ್ಲಿಯ ಮುನಿಭಾವ ದೇವಾಲಯ 10ನೆಯ ಶತಮಾನದ ಅಂತ್ಯಭಾಗದಲ್ಲಿ ರೂಪಿಸಲ್ಪಟ್ಟ ಕಟ್ಟಡ. ಏಕಶೃಂಗದ ಈ ಆಲಯದಲ್ಲಿ ಅಷ್ಟಮೂಲೆಯ ಮುಚ್ಚಿದ ಅಂಗಳದಲ್ಲಿ ಎಂಟು ಚಾಚು ಪೀಠಗಳಲ್ಲಿ ದೇವತೆಗಳ ವಿಗ್ರಹಗಳಿವೆ. ಅಂಗಳದ ಸುತ್ತಲೂ ಪರಿಪೂರ್ಣವಾದ ಕಟಾಂಜನವಿದೆ. 11ನೆಯ ಶತಮಾನದ ಅನಂತರ ಸೋಲಂಕಿ ಶೈಲಿಯ ಆಲಯಗಳು ಕಟ್ಟಲ್ಪಟ್ಟವು. ಈ ಶೈಲಿಯಲ್ಲಿ ಗರ್ಭಗೃಹ. ಅದರ ಅಕ್ಷದ ಸುತ್ತಲೂ ಹೊರ-ಒಳಬದಿಗಳೊಂದಿಗೆ ಕೂಡಿಕೊಂಡಂತೆ ಗೂಢಮಂಟಪ ಹಾಗೂ ರಥದ ವಿನ್ಯಾಸದಲ್ಲಿ ಮೇಲಿನವರೆವಿಗೂ ಮುಂಜರಿತ ಹಿಂಜರಿತಗಳಾಗಿ ವಿಭಜಿಸಿದ ಗೋಡೆಗಳು. ಪ್ರತ್ಯೇಕಗೊಳಿಸಿದ ಸಭಾಮಂಟಪ ಮತ್ತು ದೊಡ್ಡ ದೇವಾಲಯಗಳಲ್ಲಿ ಕೀರ್ತಿತೋರಣಗಳು ಈ ಶೈಲಿಯ ವಿಶಿಷ್ಟ ಅಂಶಗಳು. ಎತ್ತರದ ಜಗಲಿಯ ಮೇಲೆ ಮೂರು ಭಾಗಗಳ ಬಾಡವನ್ನೊಳಗೊಂಡು ಜಂಘದ ಭಾಗದಲ್ಲಿ ಲಂಬಿಸಿದ ಚೌಕಟ್ಟುಗಳಲ್ಲಿ ಮೂರ್ತಿ ಶಿಲ್ಪಗಳಿರುವ ಈ ಆಲಯಗಳ ಬರಾಂಡ ಇಳಿಜಾರು ಕಪೋತಗಳ ಛಜ್ಜವಾಗಿ ಮಾರ್ಪಟ್ಟಿದೆ. ಮೂಲ ಶಿಖರದ ಸುತ್ತಲೂ ಅಂಗ ಶಿಖರಗಳು; ಕಕ್ಷಾಸನಗಳುಳ್ಳ ಮಂಟಪಗಳು ಹಾಗೂ ಸಮಾನ ಕೇಂದ್ರದ, ಕಿರಿದಾಗುತ್ತ ಹೋಗುವ ದುಂಡು ಪಟ್ಟಿಗಳ ಮೇಲೆದ್ದ ಗುಮ್ಮಾಟಾಕಾರದ ಭುವನೇಶ್ವರಿ-ಇದರ ಇದರ ಲಕ್ಷಣಗಳು. ಮೊಧೇರಾದ ಸೂರ್ಯಾಲಯ, ಸುನಕ್‍ನ ನೀಲಕಂಠ ಮಹಾದೇವಾಲಯ, ಪ್ರಭಾಸಪಟ್ಟಣದ ರುದ್ರೇಶ್ವರಾಲಯ, ಪಾವಗಢದ ಲಕುಲೀಶಾಲಯಗಳು ಈ ಶೈಲಿಯ ಕೆಲವು ಉತ್ತಮ ಉದಾಹರಣೆಗಳು. ಶತ್ರುಂಜಯ ಮತ್ತು ಗಿರಿನಗರಗಳು ಜೈನ ದೇವಾಲಯಗಳ ನಗರಗಳು. ಇಲ್ಲಿ ಸರ್ವತೋಭದ್ರ ಅಥವಾ ಚೌಮುಖಗಳೆಂದು ಕರೆಯಲಾದ 16-17ನೆಯ ಶತಮಾನದ ಆಲಯಗಳು ಪ್ರಮುಖ. ನಾಲ್ಕು ದ್ವಾರಗಳುಳ್ಳ ಕೆಲವು ಆಲಯಗಳು ವಾಸ್ತುಶಿಲ್ಪದ ದೃಷ್ಟಿಯಿಂದ ಗಮನಾರ್ಹವಾದವು.

	ಮಧ್ಯಪ್ರದೇಶದ ಸುಮಾರು 5-6ನೆಯ ಶತಮಾನಗಳ ದೇವಾಲಯಗಳಲ್ಲಿ ಮುಂದೆ ಒಂದು ಸಣ್ಣ ಮಂಟಪವುಳ್ಳ ಚೌಕಾಕಾರದ ಚಪ್ಪಟೆ ಮಾಳಿಗೆಯ ಗರ್ಭಗೃಹ, ಸ್ತಂಭ ಮಂಟಪಗಳಿಂದ ಸುತ್ತುವರಿದು, ಮೊದಲಂತಸ್ತಿನಲ್ಲೂ ಚಪ್ಪಟೆಯ ಗರ್ಭಗೃಹ ಮತ್ತು ಜಗಲಿಯ ಮೇಲೆ ಕಟ್ಟಿದ ತಗ್ಗು ಶಿಖರದ ಚೌಕಾಕೃತಿಯ ಗರ್ಭಗೃಹಗಳೆಂಬ ಮೂರು ಬಗೆಗಳನ್ನು ಗುರುತಿಸಬಹುದು. ನಾಚ್ನಾಕುಠಾರದಲ್ಲಿರುವ ಪಾರ್ವತಿ ದೇವಾಲಯದ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದ್ದು ಹೊರಭಿತ್ತಿಗಳ ಮೇಲೆ ಜಾಲಾಂಧ್ರಗಳನ್ನು ಅಳವಡಿಸಲಾಗಿದೆ. ನಾಚ್ನಾದಲ್ಲಿಯೇ ಇರುವ ಚತುರ್ಮುಖ ಮಹಾದೇವಾಲಯ ಪಂಚರಥವಿನ್ಯಾಸದ್ದು. ಆದರೆ ಈಗಿರುವುದು ಚೌಕಾಕೃತಿಯ ತ್ರಿರಥದ ಗರ್ಭಗೃಹ. ಹೊರಭಾಗ ಬಲುಮಟ್ಟಿಗೆ ಅಲಂಕೃತವಾಗಿದ್ದು. ಪೂರ್ವದ ಬಾಗಿಲು ಹಾಗೂ ಇತರ ಕಡೆಯಲ್ಲಿಯ ಜಾಲಂಧ್ರಗಳ ಮೂಲಕ ಒಳಭಾಗದಲ್ಲಿ ಬೆಳಕು ಬೀಳುವಂತಿದೆ. ನಾಲ್ಕು ದಿಕ್ಕುಗಳಲ್ಲಿ ಇಳಿಜಾರು ಅಂಚುಗಳನ್ನಾಧರಿಸಿದ ಜಾಲಂಧ್ರಗಳ ಮೇಲಿನ ಜೋಡಿ ಗೂಡುಗಳಲ್ಲಿ ವಿದ್ಯಾಧರರ ವಿಗ್ರಹಗಳನ್ನು ನಿಲ್ಲಿಸಲಾಗಿದೆ. ಗೂಡುಗಳ ಮೇಲೆ ಇಳಿಜಾರು ಅಂಚಿನ ಚೈತ್ಯಾಕೃತಿಯ ಮುಂಚಾಚುಗಳಿವೆ.

	ಅಮರಕಂಟಕದಲ್ಲಿರುವ ಕೇಶವನಾರಾಯಣ, ಮಚ್ಚೇಂದ್ರನಾಥ, ಪಾಟಲೇಶ್ವರ ಮುಂತಾದ ಆಲಯಗಳು 11ನೆಯ ಶತಮಾನಕ್ಕೆ ಸೇರಿದ ಸರಳ ಕಟ್ಟಡಗಳು. ಗರ್ಭಗೃಹದ ಮೇಲೆ ವಕ್ರರೇಖೆಯ ಶಿಖರ, ಇದರ ಮುಂದೆ ಮೆಟ್ಟಲುಮೆಟ್ಟಲಾದ ಪಿರಿಮಿಡ್ಡಾಕೃತಿಯ ಮಾಳಿಗೆಯ ಮೊಗಸಾಲೆ, ಇದರ ಮುಂದೆ, ದೇವಾಲಯದ ಮುಂಭಾಗಕ್ಕೆ ಕಟಾಂಜನಗಳಿಂದ ಸುತ್ತುವರಿದ ಪಿರಮಿಡ್ಡಾಕಾರದ ಮೇಲ್ಕಟ್ಟಡದ ಸ್ತಂಭಮಂಟಪ-ಇವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅಂಶಗಳು. ಕರ್ಣ ದೇವಾಲಯವನ್ನು ಹೊರತುಪಡಿಸಿ ಉಳಿದವೆಲ್ಲ ಪಂಚರಥ ವಿನ್ಯಾಸದಲ್ಲಿವೆ. ಕರ್ಣ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು ಒಂದೊಂದರ ಮೇಲೂ ಏಳು ಇಳಿಜಾರು ಅಂಚುಗಳ ಎತ್ತರದ ಶಿಖರಗಳು, ಎಲ್ಲಕ್ಕೂ ಸೇರಿದಂತೆ ಒಂದು ಮಂಟಪ ಇದೆ; ವಿಗ್ರಹಗಳು ಇಲ್ಲವೇ ಇಲ್ಲವೆನ್ನಬಹುದು. ಈ ಲಕ್ಷಣಗಳನ್ನು ಗಮನಿಸಿದರೆ ಸಪ್ತರಥವಿನ್ಯಾಸಕ್ಕೆ ಇದು ಸೂಚಿ ಎನ್ನಬಹುದು.

	ಮಧ್ಯಪ್ರದೇಶದ ಕಳಚುರಿ-ಚಂದೇಲವಂಶಗಳ ಅರಸರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಖಜುರಾಹೊವಿನ ದೇವಾಲಯಗಳು ಈ ಶೈಲಿಯ (ಪಂಚರಥ) ಉತ್ಕøಷ್ಟ ಮಾದರಿಗಳು. ಇಲ್ಲಿ ಶೈವ, ವೈಷ್ಣವ, ಜೈನ ಪಂಥಗಳಿಗೆ ಸೇರಿದ ಸುಮಾರು 30 ಗುಡಿಗಳಿವೆ. ಶೈವ ಕಂದರಿಯ ಮಹಾದೇವ, ವೈಷ್ಣವ ಚತುರ್ಭುಜ ಹಾಗೂ ಜೈನ ಪಾಶ್ರ್ವನಾಥ ಆಲಯಗಳು ಸುಪ್ರಸಿದ್ಧವಾದವು; ಇವು ಬಲುಮಟ್ಟಿಗೆ 11ನೆಯ ಶತಮಾನದ ಉತ್ತರಾರ್ಧದಲ್ಲಿ ಅಸ್ತಿತ್ವಕ್ಕೆ ಬಂದವು. ಚಿತ್ರಗುಪ್ತ, ದೇವಿಜಗದಂಬಾ ಮತ್ತು ಕುನ್ವರ ಮಠಗಳು ಬಹುಶಃ ಸ್ವಲ್ಪ ಮೊದಲು ಕಟ್ಟಲ್ಪಟ್ಟ ನಿರಂಧಾರ (ಪ್ರದಕ್ಷಿಣಾಪಥವಿಲ್ಲದ) ಆಲಯಗಳು. ಚತುರ್ಭುಜ, ಪಾಶ್ರ್ವನಾಥ, ವಿಶ್ವನಾಥ ಮತ್ತು ಕಂದರಿಯ ಮಹಾದೇವ ಗುಡಿಗಳು ಸಾಂಧಾರ. ಕುನ್ವರ ಮಠದ ಮೂಲ ಶಿಖರದ ಸುತ್ತಲೂ ಸೂಕ್ಷ್ಮಾಕಾರ ಪ್ರತಿಕೃತಿಗಳಂಥ ಶಿಖರ ಸಾಲುಗಳಿದ್ದು ಅವು ಮೇಲಿನವರೆಗೂ ಚಾಚಿವೆ.

	ಚತುರ್ಭುಜ (ಅಥವಾ ರಾಮಚಂದ್ರ) ದೇವಾಲಯ ಪಂಚರಥ ವಿನ್ಯಾಸವಾಗಿದ್ದು ಇದರ ಬಾಡದ ಮೇಲೆ ಪಂಚಾಂಗಗಳಿವೆ. ಉಳಿದವು ಸಪ್ತರಥ, ಸಪ್ತಾಂಗಗಳನ್ನೊಳಗೊಂಡವು. ಮಂಟಪದ ಅಡ್ಡಬಾಹುಗಳಂಥ ರಥಗಳು ಗರ್ಭಗೃಹದ ಮೇಲೂ ಮುಂದುವರಿದಿದ್ದು ಉಪ್ಪರಿಗೆಯ ಕಿಟಕಿಗಳು ಸಹ ಗರ್ಭಗೃಹದ ಮೂರು ದಿಕ್ಕುಗಳಲ್ಲಿವೆ. ಮಂಟಪದ ಮೇಲಿನ ಪಿರಮಿಡ್ಡಾಕೃತಿಯ ಮೇಲ್ಕಟ್ಟಡದಲ್ಲೂ ಎರಡು ಆಮಲಕಗಳ ಕೆಳಗೆ ಘಂಟಾಕೃತಿಯ ಭಾಗವೊಂದನ್ನು ಅಳವಡಿಸಲಾಗಿದೆ. ಪಾಶ್ವಾನಾಥಾಲಯ ಗರ್ಭಗೃಹದಲ್ಲಿ ಇಂಥ ಕಿಟಕಿಗಳಿಲ್ಲದಿದ್ದರೂ, ಹಿಂಬದಿಯ ತುದಿಯಲ್ಲಿ ಮತ್ತೊಂದು ಗುಡಿಯನ್ನು ಕಟ್ಟಿರುವುದೊಂದು ವೈಶಿಷ್ಟ್ಯ.

	ಲಕ್ಷ್ಮಣ, ಪಾಶ್ರ್ವನಾಧ, ವಿಶ್ವನಾಥ ಮತ್ತು ಮಹಾದೇವ ಆಲಯಗಳು ಹಿರಿಯ ಗಾತ್ರದವು. ಅಲ್ಲದೆ, ಬಹುಶಃ ಅದೇ ಕ್ರಮದಲ್ಲಿ ಅಸ್ತಿತ್ವಕ್ಕೆ ಬಂದವು. ಲಕ್ಷ್ಮಣ ದೇವಾಲಯದ ಮಂಟಪಗಳ ಮೇಲೆ ನೇರ ಬಾಹ್ಯರೇಖೆಯ ಪಿರಮಿಡ್ಡಾಕೃತಿಯ ಶಿಖರಗಳಿವೆ. ಇದರಲ್ಲಿಯ ಕೆಲವು ಕಂಬಗಳ ಮೇಲಿನ ಸುರುಳಿಗಳ ಕೆತ್ತನೆ, ವಿಗ್ರಹಗಳ ಮನೋಹರವಾದ ಭಾಗಗಳು ಹಾಗೂ ಪ್ರಶಾಂತವಾದ ಭಾವಭಂಗಿಗಳು ಎದ್ದು ಕಾಣುತ್ತವೆ. ಪಾಶ್ರ್ವನಾಥ ದೇವಾಲಯ ಕ್ರಿ. ಶ. ಸು. 950-70ರ ನಡುವೆ ಚಂದೇಲ ಅರಸ ಧಂಗನಿಂದ ಕಟ್ಟಿಸಲ್ಪಟ್ಟ ಆಲಯ. ಜೈನಧರ್ಮೀಯರದ್ದಾದರೂ ಇದರಲ್ಲಿಯ ವಿಗ್ರಹಗಳಲ್ಲಿ ವೈಷ್ಣವ ಸಂಪ್ರದಾಯಕ್ಕೆ ಸೇರಿದ ವಿಶೇಷವಾಗಿ ಕೃಷ್ಣನ ರಂಜಕ ಜೀವನಚಿತ್ರಗಳನ್ನು ಕಾಣಬಹುದು. ಈ ವಿಗ್ರಹಗಳು ಹೆಚ್ಚು ನಿರ್ದಿಷ್ಟ ಪ್ರಮಾಣ ಮತ್ತು ಸಮಸ್ಥಾಯತ್ರಗಳನ್ನು ಪಡೆದಿವೆ. ದೀರ್ಘಚತುರಸ್ರಾಕಾರ ವಿನ್ಯಾಸದ ಈ ಆಲಯದ ಕಿರಿಯ ಪಕ್ಕಗಳಲ್ಲಿ ಮುಂಚಾಚುಗಳಿದ್ದು, ಮುಂದೆ ಒಂದು ಮಂಟಪ ಹಾಗೂ ಹಿಂಬದಿಯಲ್ಲಿ ಒಂದು ಗುಡಿಯನ್ನು ಸೇರಿಸಲಾಗಿದೆ. ಉಪ್ಪರಿಗೆಯ ಮೊಗಸಾಲೆಯಲ್ಲಿ ಕಿಟಕಿಗಳಿಲ್ಲದಿರುವುದೊಂದು ವಿಶೇಷ. ದೃಢವಾದ ಗೋಡೆಯಲ್ಲಿ ಮೂರು ಪಟ್ಟಿಗಳಲ್ಲಿ ವೈವಿಧ್ಯವಿಲ್ಲದ ವಿಗ್ರಹಗಳ ಅಲಂಕರಣವಿದೆ. ವಿಶ್ವನಾಥಾಲಯ ತದನಂತರ ಬಂದ ಮಹಾದೇವಾಲಯದ ವೈಭವಕ್ಕೆ ಮುನ್ಸೂಚಿ ಇದ್ದಂತಿದೆ. ಅಧಿಷ್ಠಾನದ ಪಟ್ಟಿಗಳು. ವಿಗ್ರಹಗಳ ಸಾಮಾನ್ಯ ಜೋಡಣೆ ಹಾಗೂ ವಿನ್ಯಾಸಗಳು ಒಂದೇ ವಿಧವಾಗಿವೆ. ಮುಮ್ಮುಖದ ಒಂಬತ್ತು ಗೂಡುಗಳಲ್ಲಿ ಸಪ್ತಮಾತೃಕೆಗಳ ಹಾಗೂ ಗಣೇಶ ಮತ್ತು ಶಿವಭದ್ರರ ವಿಗ್ರಹಗಳಿವೆ. ಕ್ರಿ. ಶ. 1002ರ ಸುಮಾರಿಗೆ ಚಂದೇಲರ ಧಂಗ ಕಟ್ಟಿಸಿದ ಗುಡಿ ಇದು.

	ಕಂದರಿಯ ಮಹಾದೇವಾಲಯ ಅತಿ ಎತ್ತರ ಹಾಗೂ ವಿಸ್ತೀರ್ಣದ್ದು. ಜಗಲಿಯನ್ನು ಹೊರತುಪಡಿಸಿ ಸುಮಾರು 30-48 ಮೀ ಎತ್ತರ ಹಾಗೂ 20.12 ಚಮೀ ವಿಸ್ತೀರ್ಣದ ಈ ಆಲಯದ ಭವ್ಯವಾದ ವಿಗ್ರಹಗಳ ಅಲಂಕರಣ, ವಾಸ್ತುಶೈಲಿಯ ಪರಿಷ್ಕರಣ, ಪಕ್ವವಾದ ವಿನ್ಯಾಸ ಹಾಗೂ ಪರಿಮಾಣಗಳು ಮಧ್ಯಭಾರತದ ವಾಸ್ತುಶಿಲ್ಪದ ಔನ್ನತ್ಯವನ್ನು ಸೂಚಿಸುತ್ತವೆ. ಸುತ್ತಲೂ ಒಟ್ಟುಗೂಡಿದಂತಿರುವ ವಿವಿಧ ಎತ್ತರಗಳ 85 ಉರೋಮುಂಜಗಳು ಶಿಖರದ ಭವ್ಯತೆಯನ್ನು ಹೆಚ್ಚಿಸಿವೆ. ಮಂಡಪ, ಶಿಖರ ಹಾಗೂ ಇತರ ಒಳಭಾಗದಲ್ಲಿಯ ಸೂಕ್ಷ್ಮ ಕೆತ್ತನೆಗಳು, ಅಲಂಕರಣಗಳು ಶಿಲ್ಪಿಗಳ ಚಾತುರ್ಯಕ್ಕೆ ಸಾಕ್ಷಿ. ದೇವಾಲಯದ ವಿವಿಧಭಾಗಗಳು ಒಂದಕ್ಕಿಂತ ಮತ್ತೊಂದು ಎತ್ತರದಲ್ಲಿ ಹೆಚ್ಚುತ್ತ ಹೋಗಿ ಮೂಲ ಗುಡಿ ಲಂಬಿಸುತ್ತ ಮೇಲೇರಿದಂತೆ ಕಾಣುತ್ತದೆ. ಗೋಡೆಯ ಮೂರು ಅಂಕಣಗಳಲ್ಲೂ ಉತ್ಸಾಹಪೂರಿತ ದೇವ-ದೇವತೆಗಳ ಶಿಲ್ಪವ್ಯೂಹಗಳಿವೆ. ಇವು ನೀಳ, ಕೃಶ, ವಿವಿಧ ಮಾದರಿಯ ಜೀವಂತ ಆವೇಶಪೂರಿತ ಭಂಗಿಗಳಲ್ಲಿವೆ. ಎತ್ತರದ ಅಧಿಷ್ಠಾನದ ಪಟ್ಟಿಗಳಲ್ಲಿ ಎರಡು ಸಾಲುಗಳಲ್ಲಿ ಆನೆಗಳ, ಕುದುರೆಗಳ, ಯೋಧರ, ಬೇಟೆಗಾರರ, ದೊಂಬರ, ಸಂಗೀತಗಾರರ, ವರ್ತಕರ, ಭಕ್ತರ, ಮಿಥುನ ದಂಪತಿಗಳ ಅಲಂಕೃತ ವಿಗ್ರಹಗಳು ತೊನೆದಾಡುತ್ತಿವೆ.

	ಖಜುರಾಹೋವಿನಲ್ಲಿ ನಾಗರಶೈಲಿಗಿಂತ ಭಿನ್ನವಾದ ಸ್ವಲ್ಪಮಟ್ಟಿಗೆ ವಿಶಿಷ್ಟ ವಿನ್ಯಾಸದ, ನಾಲ್ಕು ದ್ವಾರಗಳ ಸರ್ಮತೋಭದ್ರವೆನಿಸಿದ ಗುಡಿಗಳನ್ನು ಕಾಣಬಹುದು. ಈ ಬ್ರಹ್ಮ ಮತ್ತು ಮೃದಂಗ ಮಹಾದೇವ ಆಲಯಗಳ ಶಿಖರಗಳು ರೇಖಾಕೃತಿಯಲ್ಲಿರದೆ, ಪಿರಮಿಡ್ಡಿನಾಕಾರದಲ್ಲಿವೆ. ವೃತ್ತಾಕಾರದ ಗುಡಿಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಚಂದ್ರೇಹೆ ಮತ್ತು ಗುರ್ಗಿಗಳಲ್ಲಿಯ ಆಲಯಗಳು ಇದಕ್ಕೆ ಉದಾಹರಣೆಗಳು. ಸುಮಾರು 10ನೆಯ ಶತಮಾನದ ಈ ಆಲಯಗಳ ಗರ್ಭಗೃಹಗಳು, ಒಳಗು ಹೊರಗು ವೃತ್ತವಿನ್ಯಾಸದಲ್ಲಿದ್ದು ಅಂತರಾಳ ಮತ್ತು ತೆರೆದ ಮಂಟಪಗಳನ್ನು ಹೊಂದಿವೆ.

	ಕೃಷ್ಣಾ-ತುಂಗಭದ್ರಾನದಿಗಳ ನಡುವಣ ದಕ್ಖನ್ ಪ್ರದೇಶಗಳಲ್ಲಿ ವೇಸರವೆಂಬ (ಕರ್ನಾಟಕಕ್ಕೆ ಸೀಮಿತವೆಂದು ಹೇಳಬಹುದಾದ) ಶೈಲಿಯ ದೇವಾಲಯಗಳು ಚಾಳುಕ್ಯರ ಕಾಲದಿಂದ ಕಟ್ಟಲ್ಪಟ್ಟಿವೆ. ಇಲ್ಲಿ ನಾಗರಶೈಲಿಯ ಆಲಯಗಳನ್ನೂ ಕಾಣಬಹುದು. ಚಾಳುಕ್ಯ ಕಾಲದಿಂದ ಕಟ್ಟಲ್ಪಟ್ಟಿವೆ. ಇಲ್ಲಿ ನಾಗರಶೈಲಿಯ ಆಳಯಗಳನ್ನು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಅಲಂಪುರ ಮುಂತಾದೆಡೆಗಳಲ್ಲಿ ನೋಡುತ್ತೇವೆ. ಸಮಕಾಲೀನ ದಕ್ಷಿಣಭಾರತದ ತಮಿಳುನಾಡಿನಲ್ಲಿ ದ್ರಾವಿಡ ಶೈಲಿಯ ಕಟ್ಟಡಗಳಿಗೆ ಪಲ್ಲವ-ಪಾಂಡ್ಯ-ಚೋಳವಂಶದ ಅರಸರು ಇಂಬು ಕೊಟ್ಟರು. ಕರ್ನಾಟಕದಲ್ಲಿ ಕಲ್ಯಾಣದ ಚಾಳುಕ್ಯರ ಆಶ್ರಯದಲ್ಲಿ ಕಟ್ಟಲಾದ ದೇವಾಲಯಗಳಲ್ಲಿ ಅನಂತರ ವಿಶಿಷ್ಟವಾಗಿ ಕಂಡ ಬಂದ ಹೊಯ್ಸಳ ಶೈಲಿಯ ಆಲಯಗಳ ಮೊದಲ ಹೆಜ್ಜೆಗಳನ್ನು ಗುರುತಿಸಬಹುದು. ತಮಿಳುನಾಡಿನಲ್ಲಿ ಕೂಡ ಚೋಳರು. ಪಾಂಡ್ಯರು ತಮ್ಮವೇ ಆದ ವೈಶಿಷ್ಟ್ಯಪೂರ್ಣ ದೇವಾಲಯಗಳನ್ನು ಬಹುಸಂಖ್ಯೆಯಲ್ಲಿ ಕಟ್ಟಿಸಿದರು. 11ನೆಯ ಶತಮಾನದ ಅನಂತರ ಕರ್ನಾಟಕದಲ್ಲಿ ಹೊಯ್ಸಳ ಶೈಲಿ ರೂಪುಗೊಂಡಿತು. ನಾಗರ-ದ್ರಾವಿಡ ಶೈಲಿಗಳ ವಿಶಿಷ್ಟ ಅಂಶಗಳನ್ನು ಅಳವಡಿಸಿಕೊಂಡ ಈ ಶೈಲಿಯ ವಾಸ್ತು ಅಲಂಕರಣ ಶಿಖರ ವಿನ್ಯಾಸಗಳಲ್ಲಿ ನಾಗರಶೈಲಿಯ ಪ್ರಭಾವವನ್ನು ಕಾಣಬಹುದಾಗಿದೆ. ಆರಂಭದಲ್ಲಿ ಚಾಳುಕ್ಯ ಶೈಲಿಯ ಉನ್ನತಿಯ ಪರಾಕಾಷ್ಠೆಯನ್ನು ಇದರಲ್ಲಿ ಕಾಣಬಹುದೆಂಬ ಅಭಿಪ್ರಾಯವಿದ್ದರೂ ಇದನ್ನು ಈಗ ಪ್ರತ್ಯೇಕ ಶೈಲಿ ಎಂದು ಪರಿಗಣಿಸಲಾಗಿದೆ. ಅಲಂಕೃತ ಬಾಗಿಲುವಾಡಗಳು, ಕಡೆತ ಯಂತ್ರದಿಂದ ತಯಾರಿಸಿದ ಕಂಬಗಳು. ಜಾಲಂದ್ರಗಳು ಚಾಳುಕ್ಯ-ಹೊಯ್ಸಳ ಶೈಲಿಗಳಿಗೆ ಸಮಾನವಾದ ಅಂಶಗಳು. ಹೊಯ್ಸಳ ಶೈಲಿಯಲ್ಲಿ ಬಳಸಲಾದ ಕಪ್ಪು-ನೀಲಿ ಬಣ್ಣದ ಬಳಪದ ಕಲ್ಲು ನಾಜೂಕಾದ ಸೂಕ್ಷ್ಮವಾದ ಕೆತ್ತನೆಗಳಿಗೆ ಉತ್ತಮ ಮಾಧ್ಯಮವಾಯಿತು. ಜಗತಿಯಿಂದ ಹಿಡಿದು ವಿಮಾನದ ತುದಿಯ ಶಿಖರದ ಮೇಲಿನ ಕಲಶದವರೆಗಿನ ನಕ್ಷತ್ರಾಕಾರದ ತಲವಿನ್ಯಾಸ, ಮೂರ್ತಿ ಶಿಲ್ಪಗಳ, ಪ್ರಾಣಿಗಳ, ಹೂಬಳ್ಳಿಗಳ, ಜ್ಯಾಮಿತಿವಿನ್ಯಾಸಗಳ ಕೆತ್ತನೆಗಳಿಂದ ಕಣ್ಣು ಕೊರೈಸುವ ಭಿತ್ತಿ ಅಲಂಕರಣ. ನೆರಳು-ಬೆಳಕುಗಳಿಂದ ಮೂರ್ತಿಶಿಲ್ಪಗಳ ಮುಖದ ಭಾವನೆಯನ್ನು ಹೊರಸೂಸುವಂತೆ ಮಾಡಿರುವ ಶಿಲ್ಪ ಕುಶಲತೆ, ಒಂದೇ ಕಲ್ಲಿನಲ್ಲಿ ಕೆಳಭಾಗ ಚೌಕ, ಮಧ್ಯಭಾಗ ತಲೆಕೆಳಗಾದ ಘಂಟಾಕೃತಿ ಅಥವಾ ಕಮಲದ ವಿನ್ಯಾಸ. ಅಗ್ರದಲ್ಲಿ ಒಂದು ಅಥವಾ ಎರಡು ಚಕ್ರಗಳು, ಮೇಲೆ ಚೌಕೋನ ಬೋದಿಗೆಗಳುಳ್ಳ ಅತಿನುಣುಪಾದ ಕಂಬ, ಗೋಡೆಗಂಬಗಳು ಹಾಗೂ ಬೋದಿಗೆ ಮತ್ತು ತೊಲೆಗಳ ನಡುವೆ ಮುಂದಕ್ಕೆ ಬಾಗಿದಂತೆ ಮದನಿಕಾ ವಿಗ್ರಹಗಳು ಇವು ಈ ಶೈಲಿಯ ವಿಶಿಷ್ಟ ಲಕ್ಷಣಗಳು. ಹೊಯ್ಸಳರ ಆಲಯಗಳಲ್ಲಿ ಒಂದರಿಂದ ಐದರವರೆಗೂ ಗುಡಿಗಳಿರುತ್ತವೆ. ವಿಮನ, ಸುಕನಾಸಿ, ನವರಂಗ ಮತ್ತು ಮುಖಮಂಟಪಗಳುಳ್ಳ ಆಲಯ ವಿಸ್ತೀರ್ಣಕ್ಕಿಂತ ವಿಶಾಲವಾದ ಸುಮಾರು 150 ಸೆಂಮೀಗಳಷ್ಟು ಎತ್ತರದ ಜಗಲಿಯ ಮೇಲೆ ಕಟ್ಟಲ್ಪಟ್ಟಿರುತ್ತದೆ. ನವರಂಗದಲ್ಲಿ 4 ಕಂಬಗಳನ್ನಾಧರಿಸಿ ನಿಂತ ತಲೆಕೆಳಗಾದ ಕಮಲದ ಆಕಾರದ ಭುವನೇಶ್ವರಿ ಚಾವಣಿಯಿರುತ್ತದೆ. ಅದರ 8 ಮೂಲೆಗಳಲ್ಲಿ ಅಷ್ಟದಿಕ್ಪಾಲಕರ ಮೂರ್ತಿಗಳಿರುತ್ತವೆ. ಇವನ್ನು ಗಮನಿಸಿದಾಗ ಈ ಮೊದಲೇ ಚಾಳುಕ್ಯ ಹಾಗೂ ದ್ರಾವಿಡ ಶೈಲಿಗಳಲ್ಲಿ ಇವನ್ನು ಗಮನಿಸಿದಾಗ ಈ ಮೊದಲೇ ಚಾಳುಕ್ಯ ಹಾಗೂ ದ್ರಾವಿಡ ಶೈಲಿಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದ ಕೆಲವು ವಿಶಿಷ್ಟ ಅಂಶಗಳನ್ನು ಹೊಯ್ಸಳರು ಯುಕ್ತವಾಗಿ ಮಾರ್ಪಡಿಸಿಕೊಂಡು ಉತ್ತಮ ಕಲಾಕೃತಿಗಳಾಗಿ ರೂಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆನ್ನಬಹುದು. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು ಮತ್ತು ಕೋಲಾರಗಳನ್ನು ಹೊರತುಪಡಿಸಿ ಅನ್ಯತ್ರ, ಈ ಶೈಲಿಯ 60ಕ್ಕೂ ಹೆಚ್ಚಿನ ಆಲಯಗಳು ಕಾಣಿಸಿಕೊಂಡಿವೆ. ಬೇಲೂರು, ಹಳೇಬೀಡು, ಸೋಮನಾಥಪುರ, ಬಸರಾಳು, ಅರಸಿಕೆರೆ, ಹರಿಹರ, ನುಗ್ಗೀನಹಳ್ಳಿ, ದೊಡ್ಡಗದ್ದವಳ್ಳಿ ಮೊದಲಾದೆಡೆಗಳಲ್ಲಿರುವ ಆಲಯಗಳು ಈ ಶೈಲಿಯ ಕೆಲವು ಮಾದರಿಗಳು.

	ದಕ್ಷಿಣಭಾರತದ ವಾಸ್ತುಶಿಲ್ಪದಲ್ಲಿ ಅನಂತರ ಕಾಣುವುದು ವಿಜಯನಗರದ ವಾಸ್ತುಶಿಲ್ಪವನ್ನು, ಅಂದಿನ ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿಗಳು. ಹಿಂದೂ ಸಂಸ್ಕøತಿ ಹಾಗೂ ಧರ್ಮದ ರಕ್ಷಣೆಗಾಗಿ ದೇವಾಲಯಗಳನ್ನು ಸಾಂಸ್ಕøತಿಕ ಕೇಂದ್ರಗಳಾಗಿ ಪರಿವರ್ತಿಸಿ ಧರ್ಮಪ್ರಚಾರಕ್ಕಾಗಿ ಅದನ್ನು ಮಾಧ್ಯಮಗಳಾಗಿ ಬಳಸಲಾಯಿತು. ಹಿರಿದಾದ ಗಾತ್ರ, ವೈಭವೋಪೇತವಾದ ಪೌರುಷತ್ವ, ಅತಿಶಯ ಅಲಂಕರಣ ಈ ವಾಸ್ತುಶಿಲ್ಪದ ಕೆಲವು ಲಕ್ಷಣಗಳು; ಎಲ್ಲವೂ ಉತ್ತುಂಗ, ಭವ್ಯ. ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದ್ದ ವಾಸ್ತುಶಿಲ್ಪ ಶೈಲಿಗಳಲ್ಲಿ ಏಕರೂಪತೆಯನ್ನು ಸಾಧಿಸಲಾಯಿತು. ಹೆಚ್ಚು ಭಾರವನ್ನು ಹೊರಬಲ್ಲ ಗ್ರಾನೈಟ್ ಶೆಲೆ ಹಾಗೂ ಕಂಬಗಳ ನೆರವಿನಿಂದ ವಿಸ್ತಾರವಾದ ಮಂಟಪಗಳನ್ನು ಕಟ್ಟಲಾಯಿತು. ಈ ಶಿಲೆ ಕುಸುರಿ ಕೆಲಸಕ್ಕೆ ಒಗ್ಗದ್ದು. ಆದ್ದರಿಂದ ಮೂರ್ತಿಶಿಲ್ಪಗಳು ಗಾತ್ರದಲ್ಲಿ ದೊಡ್ಡದಾದವು. ಚೋಳ-ಪಾಂಡ್ಯ ಶೈಲಿಗಳಲ್ಲಿದ್ದಂತೆ ದೇವಾಲಯದ ಮುಂಭಾಗದಲ್ಲೆ ಎತ್ತರವಾದ ಗೋಪುರಗಳನ್ನು ಕಟ್ಟಿಸಲಾಯಿತು. ಈ ಗೋಪುರಗಳು ದೇವಾಲಯಗಳ ಎಂಟು ಅಥವಾ ನಾಲ್ಕು ಕಡೆಗಳಲ್ಲೂ ಕಟ್ಟಲ್ಪಟ್ಟು ರಾಯಗೋಪುರಗಳೆಂದು ಹೆಸರಾದುವು. ದೇವಾಲಯದ ಸುತ್ತಲಿನ ಪ್ರಾಕಾರಕ್ಕೆ ಹೊಂದಿಕೊಂಡಂತೆ ಮಂಟಪಗಳೂ ಉಪಗುಡಿಗಳೂ ಅಸ್ತಿತ್ವಕ್ಕೆ ಬಂದವು. ಕಲ್ಯಾಣ, ಉಯ್ಯಾಲೆ, ವಸಂತ, ವಾಹನ, ರಂಗ, ಕನ್ನಡಿಮಂಟಪಗಳೆಂದು ಅವನ್ನು ಹೆಸರಿಸಲಾಯಿತು. ಹೊಸ ಆಲಯಗಳ ನಿರ್ಮಾಣಕ್ಕಿಂತ ಹಳೆಯ ಆಲಯಗಳ ಜೀರ್ಣೋದ್ಧಾರ ಹಾಗೂ ಇತರ ಮಂಟಪಗಳ ಸೇರ್ಪಡೆಯಿಂದ ಅವನ್ನು ಹೆಚ್ಚು ವಿಸ್ತರಿಸಿದುದು ಈ ಕಾಲದ ಒಂದು ವೈಶಿಷ್ಟ್ಯ. ಅರಮನೆಗೆ ಸಂಬಂಧಿಸಿದಂತೆ ಲೌಕಿಕ ಕಟ್ಟಡಗಳು ಈಗ ಕಂಡುಬಂದಿವೆ. ಹಂಪೆಯಲ್ಲಿ ಅರಮನೆ, ಮಂಟಪಗಳು, ಈಜುಕೊಳ, ಆನೆಯ ಲಾಯಗಳು, ಕಮಲ ಮಹಲ್, ಕಾವಲುಗೊಪುರ, ಮಹಾನವಮಿದಿಬ್ಬ (ಇತ್ತೀಚೆಗೆ ಅದರ ಸಮೀಪದಲ್ಲಿ ದೊಡ್ಡ ಅಲಂಕೃತ ಕೊಳ, ಮಾರುಕಟ್ಟೆಯ ಸ್ಥಳ) ಮುಂತಾದ ಲೌಕಿಕ ಕಟ್ಟಡಗಳ ತಳಪಾಯ ಮಾತ್ರ ಕಲ್ಲಿನಲ್ಲಿ ಕಟ್ಟಲಾಗಿದ್ದು ಮೇಲಿನ ಸ್ತರಗಳೆಲ್ಲ ಮರಮುಟ್ಟುಗಳಿಂದ, ಗಾರೆಗಳಿಂದ ಕಟ್ಟಲಾಗಿದೆ; ಕಮಾನುಗಳ ಉಪಯೋಗ ಒಂದು ವಿಶೇಷ.

	ಈ ಕಾಲದ ದೇವಾಲಯಗಳಲ್ಲಿ ಸಾಮಾನ್ಯವಾಗಿ ಗರ್ಭಗೃಹ, ಅಂತರಾಳಗಳಿಗೆ ಹೊಂದಿದಂತೆ ಮುಚ್ಚಿದ, ಕಂಬಗಳ ಪ್ರದಕ್ಷಿಣಾಪಥ ಮತ್ತು ಪ್ರಾಕಾರಕ್ಕಿಂತ ಕೆಳಮಟ್ಟದಲ್ಲಿ ಒಂದು ಅಧಿಷ್ಠಾನ ಭಿತ್ತಿಯ ಹೊರಭಾಗದಲ್ಲಿ ಕುಂಭಪಂಜರ, ದೇವಕೋಷ್ಠ, ಅಲಂಕೃತ ಅಚ್ಚುಪಟ್ಟಿಗಳು, ಅರ್ಧ ಮಂಟಪದಲ್ಲಿ ಎರಡೂ ಕಡೆಗಳಲ್ಲಿ ಕೈಸಾಲೆಗಳು, ಧಮ್ಯದಲ್ಲಿ ನಾಲ್ಕು ಅಲಂಕೃತ ಕಂಬಗಳು ಇವೆ. ವಿಸ್ತಾರವಾದ ಮಹಾಮಂಟಪದ ಕಂಬಗಳು ರಮ್ಯವಾಗಿವೆ. ಕಂಬವನ್ನು ಆಸರೆಯಾಗಿ ಮಾಡಿಕೊಂಡು ದೊಡ್ಡ ಪ್ರಮಾಣದ, ಎರಡು ಕಾಲುಗಳನ್ನೆತ್ತಿ ಮುನ್ನುಗ್ಗುವಂತೆ ತೋರುವ ಕುದುರೆಗಳು ಅಥವಾ ಹುಲಿಗಳನ್ನು ಬಿಡಿಸಲಾಗಿದೆ. ಮಧ್ಯಭಾಗ ತೆಳುವಾಗಿದ್ದು ಸುತ್ತಲೂ ಮೂಲೆಗಂಬಗಳನ್ನು ನಿಲ್ಲಿಸಿ ಈ ಕಂಬಗಳನ್ನು ಸಣ್ಣ ಕೋಲಿನಿಂದ ಬಾರಿಸಿದಾಗ ನಾದ ಹೊರಡುವಂಥ ಇನ್ನೊಂದು ವಿಧದ ಕಂಬಗಳು ನಿರ್ಮಾಣಗೊಂಡಿವೆ. ಈ ಸ್ಥಂಭಗಳ ಮೇಲೆ ಬೋದಿಗೆಯಲ್ಲಿ ಮುಂದೆ ಚಾಚಿದ ಪೀಠ. ಅದರ ಲೋಲಕದಲ್ಲಿ ಕೆಳಮುಖವಾಗಿರುವ ತಾವರೆಯ ಮೊಗ್ಗು ಬಿಡಿಸಲಾಗಿರುತ್ತದೆ. ಕಲ್ಯಾಣಮಂಟಪದ ಈ ಶೈಲಿಯ ಇನ್ನೊಂದು ವಿಶೇಷ. ಈ ತೆರೆದ ಮಂಟಪದ ಮಧ್ಯೆ ವೇದಿಕೆ ಇದ್ದು ಅದರ ಮಧ್ಯೆ ಒಂದು ಪೀಠವಿದೆ. ಕಲ್ಯಾಣೋತ್ಸವ ಮುಂತಾದ ಉತ್ಸವಗಳನ್ನು ನಡೆಸಿದಾಗ ಉತ್ಸವ ವಿಗ್ರಹಗಳನ್ನು ಈ ಪೀಠದ ಮೇಲೆ ಕುಳ್ಳಿರಿಸಲಾಗುತ್ತಿತ್ತು. ಈ ಮಂಟಪಗಳಲ್ಲಿ ಪ್ರಾಣಿಗಳು, ಪಕ್ಷಿಗಳು, ಬಳ್ಳಿಗಳ ಚಿತ್ರಗಳಿಂದ ಅಲಂಕೃತವಾದ ಸಂಯುಕ್ತ ಕಂಬಗಳನ್ನಳವಡಿಸಲಾಗುತ್ತಿತ್ತು. ದೇವಾಲಯದ ಸುತ್ತಲೂ ಪ್ರಕಾರದ ಗೋಡೆಗಳೂ ಒಳಗೆ ಹಲವಾರು ಉಪಗುಡಿಗಳೂ ಇವೆ. ಸಾಮಾನ್ಯವಾಗಿ ನೈಋತ್ಯ ಮೂಲೆಯಲ್ಲಿ ದೇವಿಯ ಗುಡಿಯಿರುತ್ತದೆ. ಶ್ರೀವೈಷ್ಣವರ ದೇವಾಲಯಗಳಲ್ಲಿ ಆಳ್ವಾರರುಗಳಿಗೂ ಆಚಾರ್ಯರಿಗೂ ಪ್ರತ್ಯೇಕ ಗುಡಿಗಳಿದ್ದು ಅಲ್ಲಿ ಅವರ ಹುಟ್ಟುಹಬ್ಬ ಮುಂತಾದ ಉತ್ಸವಗಳಿಗಾಗಿ ವಿಶೇಷ ಏರ್ಪಾಡುಗಳನ್ನು ಮಾಡಲಾಗುತ್ತಿತ್ತು. ಗೋಪುರಗಳ ರಚನೆ ಕರ್ನಾಟಕದಲ್ಲಿ ಕಾಣಿಸಿಕೊಂಡ ಒಂದು ಬೆಳೆವಣಿಗೆ. ವಿಮಾನಗಳ ಪ್ರಾಶಸ್ತ್ಯ ಕಡಿಮೆಯಾಗಿ ಅವುಗಳಲ್ಲಿ, ಮಂಟಪಗಳ ಹೊರಭಿತ್ತಿಗಳಲ್ಲಿ, ದೇವಕೋಷ್ಠಗಳಲ್ಲಿ ಕೂಡಿಸುತ್ತಿದ್ದ ಉಬ್ಬು ಶಿಲ್ಪಗಳು ಈಗ ಗೋಪುರದಲ್ಲಿ ಸ್ಥಾನ ಪಡೆದುವು.

	ದಖನ್ ಪ್ರದೇಶದಲ್ಲಿ ವಿಜಯನಗರದ ಸಾಮ್ರಾಜ್ಯದ ವಿಜಯನಗರದ ಸಾಮ್ರಾಜ್ಯದ ಸಮಕಾಲೀನವಾಗಿ ತಲೆ ಎತ್ತಿದ ಬಹಮನೀ ರಾಜ್ಯದ ಸುಲ್ತಾನರೂ ವಾಸ್ತುಶಿಲ್ಪಕ್ಕೆ ಪ್ರೋತ್ಸಾಹಕೊಟ್ಟರು. ಇವರ ಕಟ್ಟಡಗಳು ವಿಶೇಷವಾಗಿ ಗುಲ್ಬರ್ಗ, ಬಿದರೆ, ಬಿಜಾಪುರಗಳಿಗೆ ಸೀಮಿತವಾಗಿವೆ. ಬಹಮನೀ ವಾಸ್ತುಶಿಲ್ಪದಲ್ಲಿ ಕೆಲವು ಘಟ್ಟಗಳನ್ನು ಗುರುತಿಸಬಹುದು. ಗುಲ್ಬರ್ಗ ರಾಜಧಾನಿಯಾಗಿದ್ದಷ್ಟು ಕಾಲಮಾನ ಮೊದಲನೆಯ ಘಟ್ಟದ್ದು. ಗುಲ್ಬರ್ಗದ ಕೋಟೆ 15.2 ಮೀ ಎತ್ತರದ ದ್ವಿಭಿತ್ತಿ ರೀತಿಯದು. ಸುತ್ತಲೂ ತಳಶಿಲೆಯನ್ನು ಕೊಚ್ಚಿ ಅಗೆದಿರುವ ಕಂದಕವಿದೆ. ಕೋಟೆ ಗೋಡೆಗಳ ಮೇಲಿನ ತೆನೆಗಳಿಗೆ ಬಳಸಿದ ಕಲ್ಲುಗಳಲ್ಲಿ ಕೆಲವು 3.5ಮೀ. ಎತ್ತರದ್ದಾಗಿವೆ. ಈ ಕೋಟೆ ಪಶ್ಚಿಮ ಏಷ್ಯ ಮತ್ತು ಯೂರೋಪುಗಳಲ್ಲಿಯ ಕ್ಷಾತ್ರ ವಾಸ್ತುಶಿಲ್ಪವನ್ನು ಅನುಸರಿಸಿದೆ ಎಂದು ಅಭಿಪ್ರಾಯ ಪಡಲಾಗಿದೆ. ಇದರೊಳಗಿನ ಅಳಿದುಳಿದ ಕಟ್ಟಡಗಳಲ್ಲಿ ಜುಮ್ಮಾ ಮಸೀದಿ ಪ್ರಮುಖವಾದುದು. ಇರಾನಿನ ಕ್ವಾಜನ್ ಪ್ರಾಂತದಿಂದ ಬಂದ ಶಿಲ್ಪಿ ರಫಿ ಇದರ ರಚನೆಯ ಜವಾಬ್ದಾರಿಯನ್ನು ಹೊತ್ತಿದ್ದ. ಒಳಗಿನ ವಿಶಾಲವಾದ ಅಂಗಳ ಗುಮ್ಮಟಗಳಿಂದ ಆಚ್ಛಾದಿತವಾಗಿದೆ. ಪ್ರಾರ್ಥನಾ ಕೊಠಡಿಯ ಮುಂದಣ ಅಂಕಣದ ಗುಮ್ಮಟ ಅತ್ಯಂತ ಎತ್ತರದ್ದು. ಪೂರ್ವ ದಿಕ್ಕಿನಲ್ಲಿರುವ ಎತ್ತರವಾದ ಕಮಾನಿನ ಪ್ರವೇಶದ್ವಾರದ ಚಾವಣಿಯ ಮೇಲಿನ ಮೂಲೆಗಳಲ್ಲಿ ಕುಬ್ಬಾಕಾರದ ಮಿನರೆಟ್ಟುಗಲಿವೆ. ಷಾ ಬಜಾರ್ ಮಸೀದಿ ಸಮಕಾಲೀನದ್ದೆ ಆದರೂ ಭಿನ್ನ ವಿನ್ಯಾಸದ್ದು. ಇದರ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ಬಹು ಎತ್ತರದ ಎರಡು ಮಿನಾರ್‍ಗಳಿವೆ. ಮುಚ್ಚಿದ ಪ್ರಾರ್ಥನಾ ಮಂದಿರವನ್ನು ಕಂಬಗಳಿಂದ 90 ಅಂಕಣಗಳಾಗಿ ವಿಂಗಡಿಸಿದ್ದು ಒಂದೊಂದರ ಮೇಲೂ ಗುಮ್ಮಟಗಳಿವೆ. ಬಹಮನಿ ಅರಸರ ಏಳು ಸಮಾಧಿಗಳ ಗುಂಪಿನಲ್ಲಿ ತಾಜುದ್ದೀನ್ ಫಿರೋಜನ ಸಮಾಧಿ ಸಮಾಕಾಲೀನ ವಾಸ್ತುಶಿಲ್ಪದ ಉತ್ತಮ ಮಾದರಿ. 76x24 ಚಮೀ ವಿಸ್ತೀರ್ಣದ ಇದರ ಗೋಡೆಗಳು, ಕೈ ಪಿಡಿಯೂ ಸೇರಿದಂತೆ 13 ಮೀಗಳಷ್ಟು ಎತ್ತರವಿದೆ. ಚಾವಣಿಯಲ್ಲಿ 9 ಮೀ ಎತ್ತರದ ಗುಮ್ಮಟಗಳಿವೆ. ಬಿದರೆ ರಾಜಧಾನಿಯಾದಾಗಿನಿಂದ ಈ ಶೈಲಿಯ ಎರಡನೆಯ ಘಟ್ಟ ಆರಂಭವಾಗಿದೆ. ಬಲುಮಟ್ಟಿಗೆ ಬಿದರೆ ನಗರಕ್ಕೆ ಸೀಮಿತವಾಗಿರುವ ಇಲ್ಲಿಯ ಕಟ್ಟಡಗಳು ಹೊಸ ಪರಂಪರೆಗೆ ಸೇರಿದವು. ಪರ್ಷಿಯಾದ ಶೈಲಿಯಿಂದ ಪ್ರಭಾವಿತವಾಗಿದೆ. ವರ್ಣ ಲೇಪನಗಳು ಇವುಗಳಲ್ಲಿ ಕಾಣಿಸಿಕೊಂಡಿವೆ. ಜುಮ್ಮಾ ಮತ್ತು ಸೋಲಾಕಂಬ (16 ಕಂಬಗಳ) ಮಸೀದಿಗಳು ನಿರಾಡಂಬರವಾಗಿದ್ದು ಇಸ್ಲಾಮ್ ಧರ್ಮದ ಶಿಸ್ತು. ಸರಳತೆಗಳನ್ನು ಪ್ರತಿನಿಧಿಸುತ್ತವೆ. ಮಹ್ಮೂದ್‍ಗಾವಾನನ ಮದರಸಾದ (1472) ಮಧ್ಯದಲ್ಲಿ ವಿಶಾಲವಾದ ಅಂಗಳ, ಸುತ್ತಲೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಕೊಠಡಿಗಳು, ಎತ್ತರದ ಮಿನಾರುಗಳು ಇದರ ಲಕ್ಷಣ. ಈ ಎಲ್ಲ ಕಟ್ಟಡಗಳು ತುಘಲಕ್-ಪಾರಸೀ ಶೈಲಿಯ ಅನುಕರಣಗಳಾದರೂ ಇಲ್ಲಿಯ ಹನ್ನೆರಡು ಸಮಾಧಿಗಳು ದಖನೀಶೈಲಿಗೆ ಸೇರಿದುವೆಂದು ಭಾವಿಸಲಾಗಿದೆ.

	10-11ನೆಯ ಶತಮಾನಗಳ ಅನಂತರ ಉತ್ತರ ಭಾರತ ಮಹಮದೀಯರ ಆಳ್ವಿಕೆಗೆ ಕ್ರಮೇಣ ಒಳಪಟ್ಟಾಗ ಅದರಿಂದ ಪ್ರಭಾವಿತವಾದವುಗಳಲ್ಲಿ ವಾಸ್ತುಶಿಲ್ಪಕಲೆಯೂ ಒಂದು. ಇಲ್ಲಿ ನೆಲಸಿದ ಆಕ್ರಮಣಕಾರರು ಮಸೀದಿ ಮುಂತಾದ ಕಟ್ಟಡಗಳನ್ನು ಕಟ್ಟಲು ಸಹಜವಾಗಿಯೇ ಸ್ಥಳೀಯ ರೂವಾರಿಗಳನ್ನು ನೇಮಿಸಿಕೊಳ್ಳಬೇಕಾಯಿತು. ಆಗ ಅಂಥ ಕೆಲಸಗಾರರು ತಮ್ಮ ಮೂಲಭೂತ ಕುಶಲತೆಯಿಂದ ಪ್ರಭಾವಿತವಾದುದು ಅಸಹಜವೇನಲ್ಲ. ಅಲ್ಲದೆ ಹಿಂದೂ-ಜೈನ ದೇವಾಲಯಗಳನ್ನೇ ಮಸೀದಿಗಳಾಗಿ ಪರಿವರ್ತಿಸಿದಾಗ ಅಲ್ಲಿಯ ಕಂಬಗಳು, ತೆರೆದ ಅಂಗಳ ಮುಂತಾದವನ್ನು ಹಾಗೆಯೇ ಬಳಸಬೇಕಾಯಿತು. ಇದರ ಪರಿಣಾಮವಾಗಿ ಇಂಡೊ-ಇಸ್ಲಾಮಿಕ್ ಶೈಲಿ ರೂಪುಗೊಂಡಿತು. ಎರಡು ಶೈಲಿಗಳಿಗೂ ಸಾಮಾನ್ಯವಾದ ಇನ್ನೊಂದು ಅಂಶ ಅಲಂಕರಣ ಕಲೆ. ಈ ಶೈಲಿ ಹೆಚ್ಚಾಗಿ ರೂಪುಗೊಂಡದ್ದು ದೆಹಲಿಯಲ್ಲಿ. ಕುತುಬ್‍ಮಿನಾರ್. ಅಲ್ಲಿಯ ಅಲಾಯ ದರ್ವಾಜಾ, ನಿಜಾಮುದ್ದೀನ್ ಔಲಿಯಾ ದರ್ಗಾದಲ್ಲಿಯ ಜಮಾಯತ್ ಖಾನಾ ಮಸೀದಿಗಳು ಹಿಂದೂ ವಾಸ್ತುಶಿಲ್ಪದ ಮೇಲೆ ಇಸ್ಲಾಮಿನ ಭವ್ಯ ಕಲ್ಪನೆಗಳನ್ನು ರೂಪಿಸಿದ ಮಾದರಿಗಳು. ತುಘಲಕ್ ಕಾಲದಲ್ಲಿಯ ರಾಜಕೀಯ ಏರುಪೇರುಗಳು. ಆರ್ಥಿಕ ದುರ್ದೆಸೆಗಳು ವಾಸ್ತುಶಿಲ್ಪದ ಬೆಳೆವಣಿಗೆಗೆ ದಾರಿ ಮಾಡಿಕೊಡಲಿಲ್ಲ. 15ನೆಯ ಶತಮಾನದಲ್ಲಿ ಔನ್‍ಪುರ, ಬಂಗಾಲಗಳಲ್ಲಿ ಇಂಡೊ-ಇಸ್ಲಾಮಿಕ್ ಮಿಶ್ರ ಶೈಲಿ ಬೆಳೆಯಿತು. ಗುಜರಾತಿನ ಅಹಮದಾಬಾದಿನಲ್ಲಿಯ ಜಾಮಿಮಸೀದಿ 260 ಕಂಬಗಳನ್ನು ಆಧರಿಸಿದ, 15 ಶಿಲಾಗುಮ್ಮಟಗಳಿಂದ ಕೂಡಿದ ಭವ್ಯ ಕಟ್ಟಡ. ಮೊಘಲರ ಆಳ್ವಿಕೆಯೊಂದಿಗೆ ವಾಸ್ತುಶಿಲ್ಪಕ್ಕೆ ವಿಶೇಷ ಪ್ರೋತ್ಸಾಹ ಲಭಿಸಿತು. ಬಾಬರನೇ ಹೇಳಿಕೊಂಡಿರುವಂತೆ ಆಗ್ರಾದಲ್ಲಿ ನಿತ್ಯವೂ 680 ಜನರೂ, ಸಿಕ್ರಿ ಮುಂತಾದ ಇತರೆಡೆಗಳಲ್ಲಿ 1500 ಶಿಲ್ಪಿಗಳೂ ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ್ದರು. ಆದರೆ ಆತನ ಕಾಲದ ಕಟ್ಟಡಗಳ ಕೆಲವು ಅವಶೇಷಗಳು ಮಾತ್ರ ಈಗ ಲಭ್ಯವಾಗಿವೆ. ಷೇರ್‍ಷಹ ದೆಹಲಿಯ ಪುರಾಣ ಕಿಲಾ ಎಂದು ಕರೆಯಲಾಗಿರುವ ಕೋಟೆ ಹಾಗೂ ಅಲ್ಲಿಯೇ ಹೊರಚಾಚಿದ ಬೋದಿಗೆಯ ಎರಡು ಮಹಾದ್ವಾರಗಳ ರಚನೆಗೆ ತೊಡಗಿದ. ಬಿಹಾರದ ಸಸಾರಮ್‍ನಲ್ಲಿ ಕಟ್ಟಿದ ಈತನ ಸಮಾಧಿ ಕಟ್ಟಡ ಗಂಭೀರ ಶೈಲಿಯದು. ಹಿಂದೂ ಮುಸ್ಲಿಮ್ ವಾಸ್ತುಶಿಲ್ಪಭಾವನೆಗಳ ಸೊಗಸಾದ ಸಂಮಿಲನವನ್ನು ಇಲ್ಲಿ ಕಾಣಬಹುದಾಗಿದೆ. ಅಕ್ಬರ್ ಸ್ವತಃ ಒಬ್ಬ ವಾಸ್ತುಶಿಲ್ಪಜ್ಞನಾಗಿದ್ದನೆನ್ನಬಹುದು. ಈತ ರೂಪಿಸಿದ ಕಲ್ಪನೆಗಳಿಗೆ ಶಿಲೆ, ಜೇಡಿಮಣ್ಣುಗಳ ಮೂಲಕ ಮೂರ್ತಸ್ವರೂಪ ಕೊಟ್ಟ ಫತೇಪುರ್ ಸಿಕ್ರಿಯನ್ನು ಆತನ 'ಮನಸ್ಸಿನ ದರ್ಪಣ' ಎಂದು ವರ್ಣಿಸಲಾಗಿದೆ. ಹಿಂದೂ ವಾಸ್ತುಶಿಲ್ಪವನ್ನು ಪ್ರಭಾವಪೂರ್ಣವಾಗಿ ತನ್ನ ಕಲ್ಪನೆಗಳಲ್ಲಿ ಅಳವಡಿಸಿದುದರ ಫಲವಾಗಿ ಚೌಕಾಕಾರದ ಕಂಬಗಳು, ಚಾಚು ಪೀಠದ ಸ್ತಂಭಾಗ್ರಗಳು, ಬೆಣಕಲ್ಲುಗಳಿಲ್ಲದ ಸಾಲು ಕಮಾನುಗಳು ಆಗ್ರಾ ಹಾಗೂ ಸಿಕ್ರಿಯ ಹಲವಾರು ಕಟ್ಟಡಗಳಲ್ಲಿ ಅಳವಟ್ಟಿವೆ. ಅಮೃತಶಿಲೆಯ ಬಳಕೆ ಆಗ ವಿಶೇಷವಾಗಿ ಕಂಡುಬಂದಿದೆ. ಹಿಂದೂ ಶೈಲಿಯ ಕಂಬಸಾಲುಗಳ ಮೇಲೆ ಚಾಚಿರುವ ಚಾವಣಿಯ ಹೊರಾಂಗಣವನ್ನುಳ್ಳ ದಿವಾನ್ ಎ-ಆಮ್ ರಚನಾಕ್ರಮ ಹಾಗೂ ಅಲಂಕರಣದಲ್ಲಿ ಬಲುಮಟ್ಟಿಗೆ ಭಾರತೀಯವಾದುದೆನ್ನಲಾದ ದಿವಾನ್-ಎ-ಖಾಸ್ ಬೃಹತ್ತಾದ ವಿಜಯದ್ವಾರದಲ್ಲಿ (ಬುಲಂದರ್ ದರ್ವಾಜಾ) ಬಳಸಿದ ಅಮೃತಶಿಲೆ ಹಾಗೂ ಮರಳು ಕಲ್ಲುಗಳ ಸಮನ್ವಯದಿಂದ ಭವ್ಯತೆ ಪಡೆದ ಜಾಮೀಮಸೀದಿ. ಐದು ಅಂತಸ್ತುಗಳ ಪಿರಮಿಡ್ಡಾಕಾರದ ಬೌದ್ಧವಿಹಾರಗಳನ್ನು ಹೋಲುವ ಪಂಚ ಮಹಲ್ ಮುಂತಾದವು ಗಮನಾರ್ಹ ಕಟ್ಟಡಗಳು. ರಜಪೂತ ಶೈಲಿಯನ್ನು ಅನುಕರಿಸಿ ಕಟ್ಟಲಾದ, ಜಹಾಂಗೀರನ ಪತ್ನಿ ನೂರ್‍ಜಹಾನ್ ಕಟ್ಟಿಸಿದ ಇತ್ಮದುದ್ದೌಲನ ಸಮಾಧೀ ಒಂದು ವಿಶಿಷ್ಟ ಕಟ್ಟಡ. ಷಹಜಹಾನನಂತೂ ಕಟ್ಟಡ ರಚನೆಗೆ ಅಂದಿನ ಬೆಲೆಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚಮಾಡಿದ. ವಿಪುಲ ಪ್ರದರ್ಶನ ಹಾಗೂ ಕುಶಲತೆಯಿಂದ ಕೂಡಿದ ಅಲಂಕರಣ ಈ ಕಟ್ಟಡಗಳಲ್ಲಿ ಎದ್ದು ಕಾಣುವ ಅಂಶಗಳು. ಅವನ ರಚನೆಗಳನ್ನು ಬೃಹತ್ ಗಾತ್ರದ ಆಭರಣಗಳೆಂದು ವರ್ಣಿಸಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಆತನ ಶಾಸನವೇ ಹೇಳುವಂತೆ ಆತ ಕಟ್ಟಿಸಿದ ದಿವಾನ್-ಎ-ಖಾಸ್ 'ಭೂಮಿಯ ಮೇಲಿನ ಸ್ವರ್ಗ. ತಾಜ್‍ಮಹಲ್ (ನೋಡಿ- ತಾಜ್‍ಮಹಲ್) ಒಂದು ಸುಂದರ ಭವ್ಯ ಸಮಾಧಿ-ಜಗತ್ತಿನ ಅದ್ಭುತಗಳಲ್ಲೊಂದು. ಷಹಜಹಾನನ ಅನಂತರ ವಾಸ್ತುಶಿಲ್ಪ ಅಲಕ್ಷ್ಯಕ್ಕೀಡಾಗಿ ಅವನತಿ ಹೊಂದಿತು. ಔರಂಗಜೇಬನ ಧರ್ಮನಿಷ್ಠೆ ಕುಶಲಕರ್ಮಿಗಳ, ವಾಸ್ತುಶಿಲ್ಪಿಗಳ ಪ್ರತಿಭೆಗೆ ಮಾರಕವಾಗಿ ವಾಸ್ತುಶಿಲ್ಪಕಲೆ ಕ್ಷೀಣಿಸಿತು. 18ನೆಯ ಶತಮಾನದ ಅನಂತರ ಬ್ರಿಟಿಷರ ಸಂಪರ್ಕದೊಡನೆ ಭಾರತೀಯ ವಾಸ್ತುಶಿಲ್ಪದಲ್ಲಿ ಪಾಶ್ಚಾತ್ಯ ಪ್ರಭಾವ ಕಾಣಿಸಿಕೊಳ್ಳತೊಡಗಿತು.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ